ಮುಂಬೈ

ಹಮೀದ್‌ ಬಿಡುಗಡೆಗೆ ಕುಟುಂಬ ವರ್ಗ ಒತ್ತಾಯ

Pinterest LinkedIn Tumblr

Jail-prison06ಮುಂಬೈ (ಪಿಟಿಐ): ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಬಂಧನದಲ್ಲಿರುವ ಮುಂಬೈ ಮೂಲದ ಹಮೀದ್‌ ನೆಹಾಲ್‌ ಅನ್ಸಾರಿಯನ್ನು ಮಾನವೀಯತೆ ತೋರಿ ಬಿಡುಗಡೆಗೊಳಿಸುವಂತೆ ಆತನ ಕುಟುಂಬ ಮನವಿ ಮಾಡಿದೆ.

‘ಭಾರತ–ಪಾಕಿಸ್ತಾನ ಸರ್ಕಾರಗಳು ನನ್ನ ಮಗನ ಪ್ರಕರಣವನ್ನು ಅನುಕಂಪದಿಂದ ಕಾಣಬೇಕು. ರಾಜಕೀಯ ದೃಷ್ಟಿಕೋನವನ್ನು ಮೀರಿ ನೋಡಬೇಕು ಎಂಬುಬದು ನನ್ನ ಮನವಿ’ ಎಂದು ಹಮೀದ್ ಅವರ ತಾಯಿ ಫೌಜಿಯಾ ಅನ್ಸಾರಿ ಕೋರಿದ್ದಾರೆ.

ಮುಂಬೈ ಮೂಲದ 31 ವರ್ಷದ ಹಮೀದ್‌ ಅನ್ಸಾರಿ ಎಂಜಿನಿಯರಿಂಗ್‌ ಹಾಗೂ ಮ್ಯಾನೇಜ್‌ಮೆಂಟ್‌ ಪದವೀಧರ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಹುಡುಗಿಯನ್ನು ಭೇಟಿಯಾಗಲು 2012ರಲ್ಲಿ ಅಪ್ಘಾನಿಸ್ತಾನದ ಮೂಲಕ ಅನ್ಸಾರಿ ಪಾಕಿಸ್ತಾನಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಎನ್ನಲಾಗಿದೆ.

ಆ ಬಳಿಕ ಆತನನ್ನು ಪಾಕಿಸ್ತಾನ ಸೇನೆ ಬಂಧಿಸಿ ವಿಚಾರಣೆ ನಡೆಸಿತ್ತು. ಸೇನಾ ನ್ಯಾಯಾಲಯ ಆತನನ್ನು ಗೂಢಚಾರ್ಯ ಪ್ರಕರಣದಲ್ಲಿ ದೋಷಿ ಎಂದು ನಿರ್ಣಯಿಸಿತ್ತು.

ತಮ್ಮ ಮಗ ಪಾಕ್‌ ಸೇನಾ ವಶದಲ್ಲಿರುವ ಸಂಗತಿ ತಿಳಿದು ಪಾಲಕರು, ಪಾಕಿಸ್ತಾನದ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಪಾಕಿಸ್ತಾನದ ಖೈಬರ್‌ಫಖ್ತುಂಕ್ವಾ ಪ್ರಾಂತ್ಯದ ಕೊಹತ್‌ನಲ್ಲಿ ಕಳೆದ ಭಾನುವಾರ ಹಮೀದ್‌ ದೋಷಿ ಎಂದು ನಿರ್ಣಯಿಸಲಾಗಿತ್ತು. ಬಳಿಕ ಆತನನ್ನು ಪೆಶಾವರದ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

‘ಜನವರಿ 13ರಂದು ಮಗ ಬದುಕಿರುವ ಹಾಗೂ ಪಾಕ್‌ ಸೇನಾ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿರುವ ಸಂಗತಿ ತಿಳಿಯಿತು. ಕೊನೆಗೂ ಆತನು ಸುರಕ್ಷಿತವಾಗಿ ಮರಳುವ ಭರವಸೆಯಿತ್ತು. ಆದರೆ, ಇತ್ತೀಚಿನ ಬೆಳವಣೆಗೆಯಿಂದ ನಮಗೆ ಹಿನ್ನಡೆಯಾಗಿದೆ. ಆತ ಮನೆಗೆ ಮರಳಲು ಇನ್ನಷ್ಟು ಸಮಯ ಕಾಯಬೇಕಿದೆ’ ಎಂದು 55 ವರ್ಷದ ಫೌಜಿಯಾ ಅವರು ವಿಷಾದಿಸಿದರು.

‘ನಾವು ವಿಶ್ವಾಸ ಕಳೆದುಕೊಳ್ಳುವುದಿಲ್ಲ. ನಮಗೆ ದೇವರಲ್ಲಿ ನಂಬಿಕೆಯಿದೆ. ಭಾರತ ಸರ್ಕಾರ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇದೆ. ಆತನನ್ನು ಸುರಕ್ಷಿತವಾಗಿ ಕರೆತರಲು ನಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ’ ಎನ್ನುತ್ತಾರೆ ಅವರು.

‘ಮಾನವ ಜೀವನ ಅಮೂಲ್ಯ ಹಾಗೂ ಆತನಂತಹ ಯುವಕ ಜೈಲಿನಲ್ಲಿ ಕೊಳೆಯ ಬಾರದು ಎಂಬುದನ್ನು ಉಭಯ ಸರ್ಕಾರಗಳು ಒಪ್ಪುವ ವಿಶ್ವಾಸ ನಮಗಿದೆ’ ಎನ್ನುತ್ತಾರೆ ಅವರು.

Write A Comment