ನವದೆಹಲಿ: ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಗೋಮಾಂಸ ತಿಂದು, ಮಹೀಷಾಸುರನನ್ನು ಪೂಜಿಸಿದ್ದಾರೆ ಹಾಗಾಗಿ ಅವರು, ರಾಷ್ಟ್ರ ವಿರೋಧಿಗಳು ಎಂದು ದೆಹಲಿ ಪೊಲೀಸರ ವರದಿಯಲ್ಲಿ ಹೇಳಲಾಗಿದೆ.
ಫೆಬ್ರವರಿ 9ರಂದು ಕಾಲೇಜು ಆವರಣದಲ್ಲಿ ಅಫ್ಜಲ್ ಪರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೆಲ ವಿದ್ಯಾರ್ಥಿಗಳು ಗೋಮಾಂಸ ಸೇವಿಸಿ, ಮಹೀಷಾಸುರನನ್ನು ಪೂಜಿಸಿದ್ದಾರೆ. ಮಾತೆ ದುರ್ಗಾ ಪೂಜಿಸುವ ಜಾಗದಲ್ಲಿ ಮಹೀಷಾಸುರನನ್ನು ಪೂಜಿಸಲಾಗಿದೆ. ಹಾಗಾಗಿ ಅವರು ರಾಷ್ಟ್ರ ವಿರೋಧಿಗಳು ಎಂದು ಪೊಲೀಸ್ ವರದಿ ಹೇಳಿದೆ.
ಜೆಎನ್ ಯುನಲ್ಲಿ ವಿದ್ಯಾರ್ಥಿಗಳ ಚಲನವಲನಗಳ ಬಗ್ಗೆ ಗಮನವಿಡಲು ವಿಶೇಷ ಪೊಲೀಸರನ್ನು ನಿಯೋಜಿಸಲಾಗಿತ್ತು. ಜೆಎನ್ ಯು ವಿದ್ಯಾರ್ಥಿಗಳು ಗೋಮಾಂಸ ಸೇವಿಸುತ್ತಿರುವುದರ ಬಗ್ಗೆ ಈ ಮೊದಲು ಕೂಡ ಪೊಲೀಸರು ವರದಿಗಳನ್ನು ನೀಡಿದ್ದರು.
ಕಾಲೇಜಿನಲ್ಲಿ ಸಿಸಿಟಿವಿ ಅಳವಡಿಸುವಂತೆ ಪೊಲೀಸರು ಸೂಚಿಸಿದ್ದರ ಬಗ್ಗೆ, ಕಳೆದ ಎರಡು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳ ಚಲವಲನದ ಬಗ್ಗೆ ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಯುನಿಯನ್ ಮತ್ತು ಡೆಮಾಕ್ರೆಟಿಕ್ ಸ್ಟೂಡೆಂಟ್ ಫೆಡರೇಷನ್ ಎಂಬ ಎರಡು ಗುಂಪುಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ. ಭಾವನೆಗಳಿಗೆ ಧಕ್ಕೆ ತರುವಂತಹ ದೇವತೆಗಳ ನಗ್ನ ಮತ್ತು ಆಕ್ಷೇಪಾರ್ಹ ಚಿತ್ರಗಳನ್ನು ಗೋಡೆ ಮೇಲೆ ಅಂಟಿಸುತ್ತಿದ್ದರು. ಅಫ್ಜಲ್ ಗುರು ಮರಣದಂಡನೆಯನ್ನು ಖಂಡಿಸಿದ ಈ ಗುಂಪುಗಳೇ, ದಾಂಟೆವಾಡದಲ್ಲಿ ಸಿಆರ್ ಫಿಎಫ್ ಯೋಧ ಮೃತಪಟ್ಟ ಸುದ್ದಿ ಕೇಳಿ ಖುಷಿಯಿಂದ ಆಚರಿಸಿದ್ದಾರೆ. ದುರ್ಗಾ ಜಾಗದಲ್ಲಿ ಮಹೀಷಾಸುರನನ್ನು ಪೂಜಿಸಿ, ಗೋಮಾಂಸಕ್ಕಾಗಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ, ಉಪನ್ಯಾಸ ನೀಡಲು ಎಸ್ ಎಆರ್ ಗಿಲಾನಿಯನ್ನು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವರದಿಯಲ್ಲಿ 19 ವಿದ್ಯಾರ್ಥಿಗಳ ಹೆಸರನ್ನು ಹೇಳಲಾಗಿದ್ದು, ಅದರಲ್ಲಿ ಕೆಲ ವಿದ್ಯಾರ್ಥಿಗಳು ಕಳೆದ ವರ್ಷ ಉತ್ತೀರ್ಣರಾಗಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.