ಕನ್ನಡ ವಾರ್ತೆಗಳು

ಚುನಾವಣೆ ಹಿನ್ನೆಲೆ :ಜಿಲ್ಲಾದ್ಯಾಂತ ಸೂಕ್ತ ಬಂದೋಬಸ್ತ್ – ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ : ಎಸ್ಪಿ ಎಚ್ಚರಿಕೆ

Pinterest LinkedIn Tumblr

Sp_press_meet_4

ಮಂಗಳೂರು, ಫೆ.19 : ಫೆಬ್ರವರಿ 20ರಂದು ನಡೆಯುವ ಜಿಪಂ ಹಾಗೂ ತಾಪಂ ಚುನಾವಣೆಗೆ ಸಂಬಂಧಿಸಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ತಿಳಿಸಿದ್ದಾರೆ.

ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ 824 ಮತದಾನ ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ನಡೆದ ಘಟನೆಗಳು ಹಾಗೂ ಸ್ಥಳೀಯ ಠಾಣಾ ಮಾಹಿತಿಯಂತೆ ಈ 824 ಮತದಾನ ಕೇಂದ್ರಗಳಲ್ಲಿ 61 ನಕ್ಸಲ್, 103 ಅತೀ ಸೂಕ್ಷ್ಮಮತಗಟ್ಟೆಗಳಾಗಿ, 289 ಸೂಕ್ಷ್ಮ ಮತಗಟ್ಟೆಗಳಾಗಿ ಹಾಗೂ 371 ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಿಕೊಳ್ಳಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಸೂಕ್ಷ್ಮತೆಗನುಗುಣವಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪ್ರತೀ 9 ರಿಂದ 13 ಮತದಾನಗಟ್ಟೆಗಳಿಗೆ ಗಸ್ತು ನಿರತ ಸೆಕ್ಟರ್ ಮೊಬೈಲ್ ಹಾಗೂ ತಲಾ 4 ರಿಂದ 5 ಸೆಕ್ಟರ್‌ಗಳಿಗೆ ಮೇಲ್ವಿಚಾರಣಾ ಮೊಬೈಲ್ ಸ್ಕ್ವಾಡ್‌ನ್ನು ನೇಮಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ಹಾಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಸುಮಾರು 1,200 ಜನರನ್ನು ಗುರುತಿಸಿ ಅವರ ವಿರುದ್ಧ ಭದ್ರತಾ ಕಲಂನಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದಾದರೂ ಮತಗಟ್ಟೆಯಲ್ಲಿ ಅಥವಾ ಪ್ರದೇಶಗಳಲ್ಲಿ ಕಾನೂನಿನ ಉಲ್ಲಂಘನೆ ಕಂಡುಬಂದರೆ, ಮತಗಟ್ಟೆಯಲ್ಲಿ ನಿಯೋಜಿಸಿದ ಸಿಬ್ಬಂದಿಗೆ, ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ನಿಸ್ತಂತು ಭಾಗ (ಕಂಟ್ರೋಲ್ ರೂಂ. 0824-2220500, 2440284 ಅಥವಾ 100)ಕ್ಕೆ ತಕ್ಷಣ ಮಾಹಿತಿ ನೀಡಬಹುದು. ಯಾವುದೇ ವ್ಯಕ್ತಿ ಕಾನೂನನ್ನು ಕೈಗೆತ್ತಿಕೊಂಡಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 9,968 ಬಂದೂಕುದಾರರಿದ್ದು, ಈಗಾಗಲೇ ಶೇ.99 ಬಂದೂಕುಗಳನ್ನು ಜಮಾ ಮಾಡಲಾಗಿದೆ. ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ, ನಕ್ಸಲ್ ಬಾದಿತ ಪ್ರದೇಶಗಳಲ್ಲಿ ಒಟ್ಟು 61 ಮತಗಟ್ಟೆಗಳಿದ್ದು, ಇಲ್ಲಿ ವಿಶೇಷ ಬಂದೋಬಸ್ತ್ ಕೈಗೊಳ್ಳಲಾಗಿದೆ ಹಾಗೂ ಆ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ವಿಶೇಷ ಸ್ಕ್ವಾಡ್‌ಗಳಿಂದ ನಿರಂತರ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಿದೆ ಎಂದು ಡಾ.ಶರಣಪ್ಪ ತಿಳಿಸಿದ್ದಾರೆ.

ಫೆ.19ರ ಪೂರ್ವಾಹ್ನದಿಂದ ಫೆ. 20ರ ರಾತ್ರಿ 10 ಗಂಟೆಯ ವರೆಗೆ ಹಾಗೂ ಮತ ಎಣಿಕೆಯ ಸಲುವಾಗಿ ಫೆ.22ರ ರಾತ್ರಿ 10 ಗಂಟೆಯಿಂದ ಫೆ. 23ರ ಮಧ್ಯರಾತ್ರಿವರೆಗೆ ಮದ್ಯದಂಗಡಿಗಳನ್ನು ಹಾಗೂ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶವಾಗಿದೆ.

Write A Comment