ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ಬಳಿಯಿರುವ ದುಬಾರಿ ವಾಚು ಹಾಗೂ ಐಷಾರಾಮಿ ಕಾರುಗಳ ಸಂಬಂಧ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಎಚ್ ಡಿಕೆ ತಿರುಗೇಟು ನೀಡಿದ್ದಾರೆ.
ನನ್ನ ಮಗ ನಿಖಿಲ್ ಕುಮಾರ್ ಜನ ಪ್ರತಿನಿಧಿಯಲ್ಲ ಆತನೊಬ್ಬ ಉದ್ಯಮಿ, ಹೀಗಾಗಿ ಅವನು 50 ಕೋಟಿ ರು ಬೆಲೆಯ ಕಾರನ್ನು ಕೊಂಡುಕೊಳ್ಳುತ್ತಾನೆ ಎಂದು ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯನವರ ಪುತ್ರನನ್ನು ನಾನೆಂದು ಪ್ರಶ್ನೆ ಮಾಡಿಲ್ಲ. ಉಗ್ರಪ್ಪನವರ ಕೀಳು ಮಟ್ಟಕ್ಕೆ ನಾನು ಇಳಿಯುವುದಿಲ್ಲ ಎಂದು ಕಿಡಿಕಾರಿರು ಎಚ್ ಡಿ ಕುಮಾರಸ್ವಾಮಿ ನಾನು ನನ್ನ ಮನೆ ಬಾಗಿಲು ತೆರೆಯುತ್ತೇನೆ ಕಾಂಗ್ರೆಸ್ ನವರು ಬಂದು ಎಲ್ಲಾ ಪರಿಶೀಲನೆ ನಡೆಸಲಿ, ನನ್ನ ಬಳಿಯಿರುವ ಕಾರು ಹಾಗೂ ವಾಚುಗಳನ್ನು ಲೆಕ್ಕ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ನಾನು ಅವರ ರೀತಿ ಕದ್ದು ಮುಚ್ಚಿ ಯಾವುದೇ ವ್ಯವಹಾರಗಳನ್ನು ಮಾಡಿಲ್ಲ ಎಲ್ಲವನ್ನು ನೇರವಾಗಿಯೇ ಮಾಡಿದ್ದೇನೆ. ಕಾಂಗ್ರೆಸ್ ನಾಯಕರ ಆರೋಪಗಳಿಗೆ ನಾನು ಹೆದರಿ ಓಡಿ ಹೋಗಲ್ಲ ಎಂದಿರುವ ಕುಮಾರಸ್ವಾಮಿ, ಅನಾರೋಗ್ಯದ ಕಾರಣ ನಾನು ಮೂರು ದಿನ ವಿಶ್ರಾಂತಿಯಲ್ಲಿದ್ದೇನೆ. ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ಕರೆದು ನೇರವಾಗಿ ಎಲ್ಲಾ ಆರೋಪಗಳಿಗೂ ಉತ್ತರ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯನವರಿಗೆ ಅಷ್ಟೊಂದು ಬೆಲೆ ಬಾಳುವ ವಾಚ್ ನೀಡಿದ್ದು ಯಾರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.