ವಿಶೇಷ ವರದಿ:
ಉಡುಪಿ: ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಮುಗಿದಿದ್ದು ಮಂಗಳವಾರ ಮತಎಣಿಕೆ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರಾ ಹಣಾಹಳಿ ಏರ್ಪಟ್ಟಿದ್ದು ಆಡಳಿತ ಪಕ್ಷದಲಿರುವ ಕಾಂಗ್ರೆಸಿಗೆ ಗೆಲುವು ಅಗತ್ಯವಾದರೇ ಬಿಜೆಪಿ ಪಕ್ಷಕ್ಕೆ ಪಕ್ಷ ಬಲವರ್ಧನೆ ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗೆ ಈ ಗೆಲುವು ಅನಿವಾರ್ಯವಾಗಿದೆ. ಕುಂದಾಪುರ ತಾಲೂಕಿನಲ್ಲಿ 10 ಜಿ.ಪಂ. 37 ತಾ.ಪಂ. ಕ್ಷೇತ್ರಗಳಲ್ಲಿ 99 ಮಂದಿ ಅಭ್ಯರ್ಥಿಗಳ ಭವಿಷ್ಯ ಹಾಗೂ ಮತಪೆಟ್ಟಿಗೆಯಲ್ಲಿ ಭದ್ರವಾಗಿರುವ ಮತದಾರ ಪ್ರಭುವಿನ ಆಶಿರ್ವಾದ ತಿಳಿಯಲು ಇನ್ನು ಗಂಟೆಗಳಷ್ಟೇ ಬಾಕಿ.
ಬೈಂದೂರು-ಕುಂದಾಪುರ ಹೇಗಿದೆ ಹವಾ?
ಇನ್ನು ಜಿಲ್ಲೆಯಲ್ಲಿಯೇ ಬೈಂದೂರು ಕ್ಷೇತ್ರದಲ್ಲಿ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿದ್ದು ಶಾಸಕ ಗೋಪಾಲ ಪೂಜಾರಿ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಶತಾಯಗತಾಯ ಚುನಾವಣೆ ಪೂರ್ವ ಕೆಲಸ ಮಾಡಿದ್ದರು. ಬೈಂದೂರಿನ ಒಟ್ಟು 7 ಜಿಲ್ಲಾಪಂಚಾಯತ್ ಕ್ಷೇತ್ರಗಳಲ್ಲಿ ಅಷ್ಟು ಪಂಚಾಯತ್ ತಮ್ಮ ತೆಕ್ಕೆಗೆ ತಂದುಕೊಳ್ಳಲು ಎರಡೂ ರಾಷ್ಟ್ರೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಮಾಡಿತ್ತು. ಒಂದು ಲೆಕ್ಕಾಚಾರದ ಪ್ರಕಾರ ಶಿರೂರು, ಬೈಂದೂರು, ಕಾವ್ರಾಡಿ ಹಾಗೂ ತ್ರಾಸಿ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುವ ಬಗ್ಗೆ ರಾಜಕೀಯ ವಿಷ್ಲೇಶಕರು ಮಾತನಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಖಂಬದಕೋಣೆ, ವಂಡ್ಸೆ ಹಾಗೂ ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿ ಪೈಪೋಟಿ ಸಾಧಿಸಿ ಗೆಲುವಿನ ನಗೆ ಬೀರುವ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ 4-5ಹಾಗೂ ಬಿಜೆಪಿ 2-3ಸ್ಥಾನಗಳು ಪಡೆಯುವ ಲೆಕ್ಕಾಚಾರದ ಮಾತುಗಳು ಎಲ್ಲೆಲ್ಲೂ ಕೇಳಿಬರುತ್ತಿದೆ. ಇನ್ನು ಕುಂದಾಪುರದ 5 ಕ್ಷೇತ್ರಗಳ ಪೈಕಿ 5 ಬಿಜೆಪಿ ಮಡಿಲಿಗೆ ಬೀಳಲಿದೆ ಎಂಬುದು ವಿಷ್ಲೇಷಕರ ಮಾತುಗಳು. ಕಾಂಗ್ರೆಸ್ ಪಕ್ಷದ ಗೊಂದಲಗಳು, ಸೂಕ್ತ ನಾಯಕತ್ವದ ಕೊರತೆ ಕಾಂಗ್ರೆಸ್ ಕುಂದಾಪುರದಲ್ಲಿ ನೆಲಕ್ಕಚ್ಚಲು ಕಾರಣವಾಗಲಿದೆ ಎನ್ನಲಾಗುತ್ತಿದೆ. ಇನ್ನೋಂದು ಮೂಲದ ಮಾಹಿತಿ ಪ್ರಕಾರ ಬಿಜೆಪಿ ಐದಕ್ಕೆ ಐದು ಸೀಟು ಪಡೆಯಲಿದೆ, ತಪ್ಪಿದಲ್ಲಿ ಒಂದು ಸೀಟು ಕಾಂಗ್ರೆಸ್(ಬಿಜೆಪಿಗೆ 4) ಪಾಲಿಗೆ ಸಿಗಲಿದೆ ಎಂಬ ಲೆಕ್ಕಾಚರದ ಮಾತುಗಳು ಕೇಳಿಬರುತ್ತಿದೆ.
ಗೆಲುವಿನ ಲೆಕ್ಕ-ಬೆಟ್ಟಿಂಗ್ ಪಕ್ಕಾ!
ಇನ್ನು ಕುಂದಾಪುರ ಮಟ್ಟಿಗೆ ಚುನಾವಣೆ ಅಷ್ಟೇನು ರಂಗೇರದಿದ್ದರೂ ಕೂಡ ಮತಎಣಿಕೆ ಹಾಗೂ ಯಾರು ಗೆಲ್ಲುತ್ತಾರೆ, ಅದು ಎಷ್ಟು ಮತಕ್ಕೆ ಎನ್ನುವ ನಿಟ್ಟಿನಲ್ಲಿ ಆಸಕ್ತಿ ಹಾಗೂ ಕುತೂಹಲ ಜಾಸ್ಥಿಯಾಗಿದೆ. ಇದೇ ಮೊದಲಾದ ಸಂಗತಿಗಳನ್ನಿಟ್ಟುಕೊಂಡು ಬೆಟ್ಟಿಂಗ್ ಹಾಕುತ್ತಿರುವ ಬಗ್ಗೆಯೂ ಅಲ್ಲಲ್ಲಿ ಮಾಹಿತಿಗಳಿದೆ. ಇನ್ನು ಪ್ರತಿಷ್ಟೆಯ ಕಣವಾದ ಬೈಂದೂರಿನಲ್ಲಿ ಮಾತ್ರ ಬೆಟ್ಟಿಂಗ್ ಹವಾ ಜೋರಾಗಿದೆ, ಗೆಲ್ಲುವ-ಸೋಲುವ ಅಭ್ಯರ್ಥಿ, ಎಷ್ಟು ಮತಕ್ಕೆ ಗೆಲ್ಲುತ್ತಾರೆ? ಎಂಬುದರ ಮೇಲೆ ಬೆಟ್ಟಿಂಗ್ ಕಟ್ಟಾಲಾಗುತ್ತಿದೆಯಂತೆ. ಒಂದು ಮೂಲದ ಪ್ರಕಾರ ಸಾವಿರದಿಂದ ಹಿಡಿದು ಲಕ್ಷ ಲಕ್ಷ ಹಣ ಬೆಟ್ಟಿಂಗ್ ತಾಲೂಕಿನಾದ್ಯಂತ ನಡೆಯುತ್ತಿದೆ ಎನ್ನಲಾಗುತ್ತಿದೆ.
(ಸಾಂದರ್ಭಿಕ ಚಿತ್ರಗಳು)