ನವದೆಹಲಿ (ಪಿಟಿಐ): ಜಾಟ್ ಸಮುದಾಯದವರ ಪ್ರತಿಭಟನೆಯಿಂದ ಉಂಟಾದ ನೀರು ಪೂರೈಕೆ ಬಿಕ್ಕಟ್ಟಿನ ಕುರಿತು ಹರಿಯಾಣ ಸರ್ಕಾರದಿಂದ ಸುಪ್ರೀಂಕೋರ್ಟ್ ಸೋಮವಾರ ವರದಿ ಕೇಳಿದೆ.
ಈ ಕುರಿತು ದೆಹಲಿಯ ಎಎಪಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠ, ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೂ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಒಳಗೊಂಡಿದ್ದ ಪೀಠವು, ಈ ಮೊದಲು ದೆಹಲಿ ಸರ್ಕಾರದ ಅರ್ಜಿ ವಿಚಾರಣೆಗೆ ಒಪ್ಪಿರಲಿಲ್ಲ. ಸಮಸ್ಯೆಯನ್ನು ಸರ್ಕಾರಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳುವುದು ಬಿಟ್ಟು ನ್ಯಾಯಾಲಯ ಮೊರೆ ಹೋಗಿದ್ದಕ್ಕೆ ಕಿಡಿ ಕಾರಿತ್ತು.
‘ನೀವು ಸಮಸ್ಯೆಗಳನ್ನು ಸರ್ಕಾರ–ಸರ್ಕಾರದ ಮಟ್ಟದಲ್ಲಿ ಪರಿಹರಿಸಿಕೊಳ್ಳದೇ ಸುಪ್ರೀಂ ಕೋರ್ಟ್‌ಗೆ ಬರುತ್ತಿರುವಿರಿ. ನಿಮಗೆ ಸುಪ್ರೀಂ ಕೋರ್ಟ್‌ನಿಂದ ಆದೇಶ ಬೇಕು. ಎಲ್ಲವೂ ಇಲ್ಲಿಯೇ ನಿರ್ಧಾರವಾಗಬೇಕು. ಕ್ಷೇತ್ರಕ್ಕಿಳಿದು ಕೆಲಸ ಮಾಡುವುದು ಬಿಟ್ಟು ನೀವು ಬಂದು ಕೋರ್ಟ್‌ನಲ್ಲಿ ಕುಳಿತುಕೊಳ್ಳುತ್ತೀರಿ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸುಪ್ರೀಂ ಕೋರ್ಟ್‌ನಿಂದ ಆದೇಶ ಬಯಸುತ್ತೀರಿ’ ಎಂದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ವಿಚಾರಣೆಯ ವೇಳೆ, ನೀರು ಪೂರೈಕೆ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿದ್ದು, ಸಂಜೆಯ ವೇಳೆಗೆ ಯಥಾಸ್ಥಿತಿಗೆ ಮರಳಲಿದೆ ಎಂದು ಹರಿಯಾಣ ಸರ್ಕಾರದ ಪರ ಹಾಜರಿದ್ದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ನೀರಿನ ಬಿಕ್ಕಟ್ಟು ತಪ್ಪಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸೂಚಿಸುವಂತೆ ಕೋರಿ ದೆಹಲಿ ಸರ್ಕಾರವು ಭಾನುವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲದೇ,
ದೆಹಲಿಗೆ ನೀರು ಸರಬರಾಜು ಮಾಡಲಾಗುವ ಹರಿಯಾಣದ ಮುನಾಕ್ ಕಾಲುವೆಯ ಭದ್ರತೆಗೆ ಸೇನೆ ನಿಯೋಜಿಸುವಂತೆಯೂ ಕೇಂದ್ರಕ್ಕೆ ನಿರ್ದೇಶನ ನೀಡಲು ಎಎಪಿ ಅರ್ಜಿಯಲ್ಲಿ ಮನವಿ ಮಾಡಿತ್ತು.
ಇತರೆ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಜಾಟ್ ಸಮುದಾಯದವರು ಹರಿಯಾಣದಲ್ಲಿ ತೀವ್ರತರ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲೇ ರಾಷ್ಟ್ರೀಯ ರಾಜಧಾನಿ ನವದೆಹಲಿಗೆ ನೀರು ಸರಬರಾಜು ಮಾಡಲಾಗುವ ಮುನಾಕ್ ಕಾಲುವೆಯಲ್ಲೂ ಧರಣಿ ನಡೆಸುತ್ತಿದ್ದರು. ಕಾಲುವೆಯನ್ನು ಹಾನಿಗೊಳಿಸಿದ ಬಗ್ಗೆಯೂ ವರದಿಗಳಿದ್ದವು.