ಕೆಲಸಕ್ಕೆ ಹೋಗೋ ಮಹಿಳೆಯರು ಬೆಳಗ್ಗೆ ಎದ್ದು ಎಷ್ಟೇ ಬೇಗ ಮನೆಗೆಲಸ ಮುಗಿಸಿದ್ರೂ ತಿಂಡಿ ತಿನ್ನೋಕೂ ಟೈಂ ಇಲ್ಲ ಅಂತ ಆಫೀಸ್‍ಗೆ ಹೊರಟುಬಿಡ್ತಾರೆ. ಹೀಗಿರೋವಾಗ ಪ್ರತಿದಿನ ಮೇಕಪ್ ಮಾಡ್ಕೊಂಡು ಆಫೀಸಿಗೆ ಹೋಗೋಕಾಗುತ್ತಾ? ಇಲ್ಲವೆ ಇಲ್ಲ ಎಂದು ಹೇಳ್ಬೋದು. ಆದರೆ ಮನಸ್ಸು ಮಾಡಿದ್ರೆ ಆಗುತ್ತೆ. ಅದಕ್ಕೆ ಹೆಚ್ಚಿನ ಸಮಯ ಸ್ಪೆಂಡ್ ಮಾಡೋ ಅಗತ್ಯ ಇಲ್ಲ. ಸುಂದರವಾಗಿ ಕಾಣಬೇಕೆಂಬ ಹಂಬಲವಿದ್ದರೆ ಹೆಚ್ಚೆಂದರೆ 5 ನಿಮಿಷ ಮೇಕಪ್‍ಗಾಗಿ ಮೀಸಲಿಟ್ಟರೆ ಸಾಕು. ಐದೇ ಐದು ನಿಮಿಷದಲ್ಲಿ ಮೇಕಪ್ ಮಾಡೋದು ಹೇಗೆ ಅಂತ ಈ ಐದು ಸಿಂಪಲ್ ಸ್ಟೆಪ್ಸ್‍ನಲ್ಲಿ ಕಲಿತುಕೊಳ್ಳಿ.
ಸ್ಟೆಪ್-1 ಕ್ಲೆನ್ಸಿಂಗ್
ನಿಮ್ಮ ಚರ್ಮಕ್ಕೆ ಹೊಂದುವಂತಹ ಫೇಸ್ ವಾಶ್ ಬಳಸಿ ಮುಖ ಮತ್ತು ಕುತ್ತಿಗೆಯ ಭಾಗವನ್ನು ನಿಧಾನವಾಗಿ ಉಜ್ಜಿ. 30 ಸೆಕೆಂಡ್ ಕಾಲ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖ ಒರೆಸುವಾಗ ಮೃದುವಾದ ಬಟ್ಟೆಯಿಂದ ಒತ್ತಿ ನೀರನ್ನು ತೆಗೆಯಿರಿ. ಟವಲ್‍ನಿಂದ ಜೋರಾಗಿ ಒರೆಸಿದರೆ ಮುಖ ಕ್ರಮೇಣವಾಗಿ ಸುಕ್ಕುಗಟ್ಟುತ್ತದೆ. ಸಾಮಾನ್ಯವಾಗಿ ಹುಡುಗಿಯರು ಮುಖ ತೊಳೆಯುವಾಗ ಕುತ್ತಿಗೆಯ ಭಾಗಕ್ಕೆ ಹೆಚ್ಚು ಗಮನ ಕೊಡುವುದಿಲ್ಲ. ಹಾಗೆ ಮಾಡಿದಾಗ ಮುಖ ಮತ್ತು ಕುತ್ತಿಗೆಯ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಸೋ ಡೋಂಟ್ ಡೂ ಇಟ್.
ಸ್ಟೆಪ್-2 ಬಿಬಿ ಕ್ರೀಂ/ ಮಾಯ್‍ಶ್ಚರೈಸರ್
ಮೇಕಪ್ ಮಾಡುವಾಗ ಫೌಂಡೇಶನ್ ಕ್ರೀಂ ಬಳಸುವುದು ಈಗ ಔಟ್‍ಡೇಟೆಡ್ ಆಗಿದೆ. ಅದರ ಬದಲಾಗಿ ಬಿಬಿ(ಬ್ಯೂಟಿ ಬೆನಿಫಿಟ್) ಕ್ರೀಂಗಳು ಮಾರ್ಕೆಟ್‍ಗೆ ಲಗ್ಗೆ ಇಟ್ಟಿವೆ. ಈ ಕ್ರೀಂಗಳಲ್ಲಿ ಫೌಂಡೇಶನ್ ಮತ್ತು ಮಾಯ್‍ಶ್ಚರೈಸರ್ ಎರಡೂ ಇರುವುದರಿಂದ ನಿಮ್ಮ ಮುಖದ ಕಲೆಗಳನ್ನು ಮರೆಮಾಚುವುದರ ಜೊತೆಗೆ ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನೂ ಒದಗಿಸುತ್ತದೆ. ಬಿಬಿ ಕ್ರೀಮನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡು ಮುಖ, ಕಿವಿ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ. ಕ್ರೀಂ ಸುಲಭವಾಗಿ ಚರ್ಮದೊಂದಿಗೆ ಹೊಂದಿಕೊಳ್ಳುವುದರಿಂದ ಫೌಂಡೇಶನ್ ರೀತಿ ಅಲ್ಲಲ್ಲಿ ಪ್ಯಾಚ್ ಆದಂತೆ ಕಾಣುವುದಿಲ್ಲ.
ಸ್ಟೆಪ್-3 ಕಾಜಲ್/ ಐ ಲೈನರ್
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ ಅಂತ ಹಾಡು ಕೇಳಿದ್ದೀರಲ್ಲ. ಅದು ಮೇಕಪ್ ವಿಷಯದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಆದ್ದರಿಂದ ಮನೆಯಿಂದ ಹೊರಡುವ ಮುನ್ನ ಕಾಜಲ್(ಕಾಡಿಗೆ) ಅಥವಾ ಐ ಲೈನರ್ ಹಚ್ಚುವುದನ್ನು ಎಂದಿಗೂ ಮರೆಯಬೇಡಿ. ಹಾಗಂತ ಕಡಿಮೆ ಬೆಲೆಯ ಕಾಜಲ್ ಮತ್ತು ಐ ಲೈನರ್ ಬಳಸಿ ಕಣ್ಣಿಗೆ ತೊಂದರೆ ತಂದುಕೊಳ್ಳಬೇಡಿ. ಉತ್ತಮ ಗುಣಮಟ್ಟದ ಬ್ರಾಂಡನ್ನೇ ಖರೀದಿಸಿ. ಇಲ್ಲಿಗೆ ಸ್ಟೆಪ್ 3 ಮುಗೀತು. ನಮಗೀಗ ಉಳಿದಿರುವುದು ಎರಡೇ ನಿಮಿಷ. ಸೋ ಹರ್ರಿ
ಸ್ಟೆಪ್-4 ಲಿಪ್‍ಸ್ಟಿಕ್/ ಲಿಪ್ ಕೇರ್
ತುಟಿಗೆ ಲಿಪ್‍ಸ್ಟಿಕ್ ಹಚ್ಚಬೇಕೇ ಬೇಡವೇ ಎನ್ನುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ನೀವು ತುಂಬಾ ಸಿಂಪಲ್ ಆಗಿ ಕಾಣಲು ಇಚ್ಚೀಸುತ್ತೀರ ಎಂದರೆ ಯಾವುದಾದರೂ ಉತ್ತಮ ಗುಣಮಟ್ಟದ ಲಿಪ್‍ಕೇರ್ ಬಳಸಿ. ಲೈಟ್ ಆಗಿ ಕಲರ್ ಬೇಕೆಂದರೆ ಪಿಂಕ್ ಅಥವಾ ತಿಳಿ ಕೇಸರಿ ಬಣ್ಣದ(ಪೀಚ್ ಕಲರ್) ಲಿಪ್‍ಕೇರ್ ಬಳಸಿ. ಬೋಲ್ಡ್ ಲುಕ್‍ಗಾಗಿ ಕೆಂಪು ಬಣ್ಣದ ಲಿಪ್‍ಸ್ಟಿಕ್ ಉತ್ತಮ ಆಯ್ಕೆ. ಅದಲ್ಲದೆ ಪಿಂಕ್ ಅಥವಾ ಪೀಚ್ ಶೇಡ್‍ನ ಲಿಪ್‍ಸ್ಟಿಕ್‍ಗಳು ಫಾರ್ಮಲ್ ಲುಕ್ ಕೊಡುತ್ತವೆ.
ಸ್ಟೆಪ್- 5 ಹೇರ್‍ಸ್ಟೈಲ್
ಅಬ್ಬಬ್ಬಾ ಅಂತೂ ಮುಖದ ಮೇಕಪ್ ಮಗಿಸಿ ಆಯ್ತು. ಈಗ ಕೂದಲನ್ನು ಹೇಗೆ ಓರಣವಾಗಿಸಬೇಕು ಅನ್ನೋದೇ ದೊಡ್ಡ ವಿಷಯ. ಕೆಲವರಿಗೆ ಸುಂದರವಾದ ರೇಷ್ಮೆಯಂತಹ ಕೂದಲಿದ್ದರೆ ಇನ್ನು ಕೆಲವರಿಗೆ ಒರಟಾದ, ಗುಂಗುರಾದ ಕೂದಲಿರುತ್ತದೆ. ಅದಕ್ಕೆ ತಕ್ಕಂತೆ ಕರ್ಲರ್ ಅಥವಾ ಸ್ಟ್ರೇಟ್‍ನರ್ ಬಳಸಬಹುದು. ಕೂದಲ ಆರೈಕೆಗಾಗಿ ಪ್ರತಿ ಬಾರಿ ತಲೆ ಸ್ನಾನ ಮಾಡಿದಾಗಲೂ ಕಂಡೀಷನರ್ ಬಳಸುವುದನ್ನು ಮರೆಯಬೇಡಿ. ಇದರಿಂದ ಕೂದಲಿನ ಒರಟುತನ ಕಡಿಮೆಯಾಗಿ ಸುಲಭವಾಗಿ ನಿಭಾಯಿಸಲು ಸಹಾಯವಾಗಿತ್ತದೆ. ನಿಮ್ಮ ಮುಖಕ್ಕೆ ಹೊಂದಿಕೆಯಾಗುವಂತೆ ಹೇರ್‍ಸ್ಟೈಲ್ ಮಾಡಿಕೊಳ್ಳಿ. ಒದ್ದವಾದ ಕೂದಲಿದ್ದರೆ ಜಡೆ ಹೆಣೆಯಬಹುದು ಅಥವಾ ಜುಟ್ಟು(ಪೋನಿ ಟೇಲ್) ಹಾಕಬಹುದು. ಶಾರ್ಟ್ ಹೇರ್ ಇರುವವರು ಕೂದಲನ್ನು ನೀಟಾಗಿ ಬಾಚಿ ಹಾಗೇ ಬಿಟ್ಟರೆ ಚೆನ್ನಾಗಿ ಕಾಣುತ್ತದೆ. ನಿಮಗಿಷ್ಟವಿದ್ದರೆ ಚಿಕ್ಕ ಕ್ಲಿಪ್ ಧರಿಸಿದರೆ ಕ್ಯೂಟ್ ಆಗಿ ಕಾಣುತ್ತೀರಿ.
ನೋಡಿದ್ರಾ ಮೇಕಪ್ ಮಾಡೋಕೆ ಗಂಟೆಗಟ್ಟಲೆ ಕನ್ನಡಿ ಮುಂದೆ ನಿಲ್ಲಬೇಕಿಲ್ಲ. ಆಫೀಸ್‍ಗೆ ಲೇಟ್ ಆಯ್ತು ಅಂತ ಸಿಕಿದ್ದನ್ನು ಬಳಿದುಕೊಂಡು ಹೋಗುವ ತಾಪತ್ರಯವೂ ಇಲ್ಲ. ನಾಳೆ ಯಾವ ಬಟ್ಟೆ ಹಾಕೋದು ಅಂತ ಡಿಸೈಡ್ ಮಾಡಿ ಅದಕ್ಕೆ ತಕ್ಕಂತೆ ಹಿಂದಿನ ರಾತ್ರಿಯೇ ತಯಾರಿ ಮಾಡಿಕೊಂಡ್ರೆ ಆಫೀಸ್‍ನಲ್ಲಿ ನೀವು ಮಿಂಚೋದು ಗ್ಯಾರಂಟಿ.