ಬೆಂಗಳೂರು: ನ್ಯಾಯಾಲಯದ ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಎನ್. ಹಕೀಮ್ ಅವರನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.
ಎ.ಎನ್. ಹಕೀಮ್ ಅವರ ಮೇಲಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ವೇಣು ಗೋಪಾಲಗೌಡ ನೇತೃತ್ವದ ಸಮಿತಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಹಕೀಮ್ ವಿರುದ್ಧದ ಆರೋಪಗಳು ಸಾಬೀತಾಗಿದ್ದವು. ಸಮಿತಿಯು ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಈ ವರದಿ ಆಧರಿಸಿದ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ (ಸೇವೆಗಳು-6) ಶ್ರ. ದೇ. ಸುನಂದ ಅವರು ಎ.ಎನ್. ಹಕೀಮ್ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ.
ಪ್ರಕರಣವೇನು?
ಹಕೀಮ್ ಅವರು ಬೆಳಗಾವಿಯ 3 ಮತ್ತು 4ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ಮತ್ತು ತ್ವರಿತ ನ್ಯಾಯಾಲಯದ ಪ್ರಿಸೈಡಿಂಗ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ವೇಳೆ ನ್ಯಾಯಾಲಯದ ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅನಾಮಧೇಯ ಪತ್ರ ಬರೆಯಲಾಗಿತ್ತು.
ಪತ್ರವನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ವರ್ಗಾಯಿಸಿದ್ದ ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ನಿರ್ದೇಶಿಸಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್ ನ್ಯಾಯಮೂರ್ತಿ ಎನ್. ವೇಣುಗೋಪಾಲ ಗೌಡ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ಸಮಿತಿಯು ದೂರಿನ ಮೂಲ ಆಧರಿಸಿ, ಹಕೀಮ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ ಎನ್ನಲಾದ ಮಹಿಳಾ ಸಿಬಂದಿಯನ್ನು ವಿಚಾರಣೆ ನಡೆಸಿತ್ತು. ವಿಚಾರಣೆ ಸಂದರ್ಭದಲ್ಲಿ ಹಕೀಮ್ ಅವರು ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿತ್ತು. ಹೀಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ವಿಚಾರಣಾ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿತ್ತು.
-ಉದಯವಾಣಿ