ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘಾನಾ ರಾಜ್ ಮದುವೆ ಆಗಿದೆಯಾ? ಹೀಗೊಂದು ಸುದ್ದಿ ಈಗ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಟಿ ವಿರುದ್ಧ ದೂರು ದಾಖಲಾಗಿದೆ.
ಈಗ ತಾನೆ ಕನ್ನಡದಲ್ಲಿ ಬೇರೂರುತ್ತಿರುವ ಮೇಘನಾ, ಮಲೆಯಾಳಂನಲ್ಲೂ ಸದ್ದು ಮಾಡುತ್ತಿದ್ದಾರೆ. ಆದರೆ ತಮಿಳುನಾಡು ಧರ್ಮಪುರಿಯ ವ್ಯಕ್ತಿಯೊಂದಿಗೆ ಮೇಘನಾ ಮದುವೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೇ ಮೇಘನಾ ಮದುವೆ ಪ್ರಮಾಣ ಪತ್ರವನ್ನು ನೀಡದೇ ಮೋಸಮಾಡುತ್ತಿದ್ದಾರೆ ಎಂದು ಇ ಮೇಲ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ.
ನಟ ಸುಂದರ್‍ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಯ ಪುತ್ರಿ ಮೇಘನಾರಾಜ್, ರಾಜಾಹುಲಿ ಚಿತ್ರದಲ್ಲಿ ಮಿಂಚಿದ್ದರು. ಮೇಘನಾ ಜೊತೆ ಮದುವೆಯಾಗಿದ್ದೇನೆ ಎಂದು ದೂರಿರುವ ಜನಾರ್ಧನ್, ಆಕೆ ಮದುವೆಯಾಗಿ ವಂಚಿಸುತ್ತಿದ್ದಾಳೆ, ಮದುವೆ ಸರ್ಟಿಫಿಕೇಟ್ ಕೊಡುತ್ತಿಲ್ಲ ಎಂದು ದೂರಿದ್ದಾರೆ. ತಮಿಳುನಾಡು ಧರ್ಮಪುರಿಯ ವಿಳಾಸ ನೀಡಿ ದೂರು ಕಳುಹಿಸಿರುವ ಜನಾರ್ಧನ್, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಇ-ಮೇಲ್ ದೂರು ಕಳುಹಿಸಿದ್ದಾರೆ.
2015 ಏಪ್ರಿಲ್ 9ರಂದು ಜನಾರ್ಧನ್ ಮೊದಲ ಬಾರಿಗೆ ದೂರು ನೀಡಿದ್ದರು. ಇದಾದ ಬಳಿಕ 2015 ಡಿಸೆಂಬರ್ 25ರಂದು ಮತ್ತೆ ದೂರು ಕಳುಹಿಸಿದ್ದಾರೆ. ಡಿಸೆಂಬರ್‍ನಲ್ಲಿ ದೂರು ಕೊಟ್ಟ ನಂತರ ಚುರುಕಾದ ಜೆ.ಪಿ ನಗರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸದ್ಯ ಈ ದೂರು ಸುಳ್ಳು ಎಂದು ತೀರ್ಮಾನಿಸಿರುವ ಪೊಲೀಸರು ತಂಡದೊಂದಿಗೆ ಜನಾರ್ಧನ್ ಪತ್ತೆಗಾಗಿ ಧರ್ಮಪುರಿಗೆ ತೆರಳಿದ್ದಾರೆ. ಜನಾರ್ಧನ್ ಕಳುಹಿಸಿರುವ ದೂರಿನ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದೀಗ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಮೇಘನಾರಾಜ್ ಕುಟುಂಬ ನಿರಾಕರಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿಯೇ ಇಲ್ಲ, ಪೊಲೀಸರು, ವಕೀಲರ ಜೊತೆ ಚರ್ಚಿಸಿ ಪ್ರತಿಕ್ರಿಯಿಸುತ್ತೇನೆ ಎಂದು ಸುಂದರರಾಜ್ ತಿಳಿಸಿದ್ದಾರೆ.