ಮಂಗಳೂರು : ಮಂಗಳೂರಿನ ಹೊರವಲಯದಲ್ಲಿರುವ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದಲ್ಲಿ ಅಪರೂಪದ ಅತಿಥಿಯ ಪ್ರವೇಶವಾಗಿದ್ದು, ಇದೀಗ ವಿಶೇಷ ಆಕರ್ಷಣೆ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮಿಜಾರು ಸಮೀಪದ ಎಡಪದವಿನ ಕಾಡಿನಲ್ಲಿ ನಾಲ್ಕು ದಿನಗಳ ಹಿಂದೆ ಕಾಡಿನಲ್ಲಿ ಕಂಡುಬರುವ ಅಪರೂಪದ ಬಿಳಿ ಹೆಬ್ಬಾವು ಕಂಡು ಬಂದಿದ್ದು, ಸ್ಥಳೀಯರು ಕೂಡಲೇ ಈ ಬಗ್ಗೆ ಪಿಲಿಕುಳ ನಿಸರ್ಗಧಾಮಕ್ಕೆ ಮಾಹಿತಿ ನೀಡಿದ್ದರು. ಪಿಲಿಕುಳ ಜೈವಿಕ ಉದ್ಯಾನವನದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಈ ಹೆಬ್ಬಾವನ್ನು ಹಿಡಿದು ತಂದು ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದಲ್ಲಿ ಬಿಟ್ಟಿದ್ದಾರೆ.
ಈ ಹೆಬ್ಬಾವು 6 ಅಡಿ ಉದ್ದವಿದ್ದು, ಸುಮಾರು 2 ವರ್ಷ ಪ್ರಾಯ ಇರಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಹೆಬ್ಬಾವುಗಳು ಸುಮಾರು 20 ರಿಂದ 25 ವರ್ಷವರೆಗೆ ಬದುಕುತ್ತವೆ ಎನ್ನಲಾಗಿದೆ.
ಈ ಅಪರೂಪದ ತಳಿಯ ಬಿಳಿ ಬಣ್ಣದ ಹೆಬ್ಬಾವನ್ನು ಇದೀಗ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದ್ದು, ಇದೀಗ ಇದು ಸಾರ್ವಜನಿಕರ ಹಾಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.