ಬೆಂಗಳೂರು /ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರ ಅಯ್ಕೆಗಾಗಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ಡಾ| ಮನು ಬಳಿಗಾರ್ ಅವರು (2016-19 ಅವಧಿಗೆ) ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ಕೆ.ನಾಗರಾಜ್ ಅವರು ಬುಧವಾರ ಕಸಾಪ ರಾಜ್ಯಾಧ್ಯಕ್ಷರಾಗಿ ಮನು ಬಳಿಗಾರ್ ಅವರು ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮನುಬಳಿಗಾರ್ ಅವರು ಒಟ್ಟು 61,535 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಜಯಪ್ರಕಾಶ್ ಗೌಡ(22,980) ಅವರಿಗಿಂತ ಸುಮಾರು 38,555 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಎಚ್.ಎಲ್.ಜನಾರ್ಧನ್ 6089, ಸಂಗಮೇಶ್ ಬಾದವಾಡಗಿ 4547, ಪಟೇಲ್‌ಪಾಂಡು 3900, ಆರ್.ಎಸ್.ಎನ್.ಗೌಡ 1681, ಶಿವರಾಜ ಗುರುಶಾಂತಪ್ಪ ಪಾಟೀಲ್ 1590 ಮತಗಳನ್ನಷ್ಟೇ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಜಯಪ್ರಕಾಶ್ ಗೌಡ ಅವರನ್ನು ಹೊರತು ಪಡಿಸಿದರೆ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಕಣದಲ್ಲಿ ಉಳಿದಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 1.87 ಲಕ್ಷ ಮತದಾರರನ್ನು ಹೊಂದಿದ್ದರೂ ಕೂಡ ಚಲಾವಣೆಯಾದ ಮತಗಳು ಕೇವಲ 1.08 ಲಕ್ಷ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಚುನಾವಣೆಯಲ್ಲಿ ಶೇ.57.74ರಷ್ಟು ಮತದಾನವಾಗಿದೆ. ಕಳೆದ ಬಾರಿ ಶೇ.43.87ರಷ್ಟು ಮಾತ್ರ ಮತದಾನವಾಗಿತ್ತು.
38,555 ಮತಗಳ ಅಂತರದಿಂದ ಗೆಲುವು :
ಶತಮಾನದ ಇತಿಹಾಸ ಇರುವ ಕಸಾಪದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಸುಮಾರು 38,555 ಮತಗಳ ಅಂತರದಿಂದ ಜಯಗಳಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.
25ನೇ ಅಧ್ಯಕ್ಷರಾಗಿ ಡಾ.ಮನುಬಳಿಗಾರ್ ಆಯ್ಕೆ :
ಕಸಾಪ 25ನೇ ಅಧ್ಯಕ್ಷರಾಗಿ ಡಾ.ಮನುಬಳಿಗಾರ್ ಅವರು ಮಾ.3ರಂದು ಬೆಳಗ್ಗೆ 11ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಶ್ರೀಕೃಷ್ಣರಾಜ ಪರಿಷನ್ಮಂದಿರಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಸಾಪ ಆಡಳಿತಾಧಿಕಾರಿಯಾಗಿ ಉಸ್ತುವಾರಿ ವಹಿಸಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ