ಕುಂದಾಪುರ: ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಎದುರು ಸಂಭ್ರಮದ ವಾತಾವರಣವಿತ್ತು. ಒಂದೆಡೆ ಶಿವರಾತ್ರಿ ಸಂಭ್ರಮವಾದರೇ ಇನ್ನೊಂದೆಡೆ ಕನ್ನಡ ನುಡಿಹಬ್ಬದ ಸಂಭ್ರಮ. ಕನ್ನಡ ವಾತಾವರಣವನ್ನು ಎಲ್ಲೆಡೆ ನಿರ್ಮಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿರುವ ಈ ಉತ್ಸವ ಕೋಟೇಶ್ವರಕ್ಕೆ ಆಗಮಿಸಿದ ಕ್ಷಣಗಳಿದು.
ಕಾರವಾರದಲ್ಲಿ ಕಾರ್ಯಕ್ರಮ ಮುಗಿಸಿ ಕೋಟೇಶ್ವರಕ್ಕೆ ಆಗಮಿಸಿದ ಕನ್ನಡ ನುಡಿಹಬ್ಬವು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳದ ಎದುರು ಅದ್ಧೂರಿಯಾಗಿ ನಡೆಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕುಂದಾಪುರ ತಾಲ್ಲೂಕು ಆಡಳಿತ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ವೀರಗಾಸೆ, ಡೊಳ್ಳುಕುಣಿತ, ಹೌದರಾಯನ ವಾಲ್ಗುವೆ ಸೇರಿದಂತೆ ರಾಜ್ಯದ ವಿವಿಧ ಜಾನಪದ ಕಲಾತಂಡಗಳು ಈ ಉತ್ಸವದ ಕನ್ನಡ ನುಡಿ ಜಾಗೃತಿ ಜಾಥಾದಲ್ಲಿ ಪಾಲ್ಘೊಂಡಿದ್ದರು. ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಕನ್ನಡ ಬಾವುಟ ಹಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ್ರು. ದೇವಳದಿಂದ ಆರಂಭಗೊಂಡ ಈ ಬೃಹತ್ ಜಾಥಾ ಕೋಟೇಶ್ವರ ಪ್ರಮುಖ ಪೇಟೆಗಳಲ್ಲಿ ಸಂಚರಿಸಿತು.
ಜಾಥಾದ ಬಳಿಕ ಕೋಟಿಲಿಂಗೇಶ್ವರ ದೇವಸ್ಥಾನದ ಎದುರು ನಿರ್ಮಿಸಲಾದ ಅಧ್ದೂರಿ ವೇದಿಕೆಯಲ್ಲಿ ಕನ್ನಡ ನುಡಿಹಬ್ಬಕ್ಕೆ ಸಚಿವ ವಿನಯಕುಮಾರ್ ಸೊರಕೆ ಚಾಲನೆ ನೀಡಿ ಶುಭ ಹಾರೈಸಿದ್ರು. ಅತ್ಯಂತ ರುಚಿಕರವಾದ ಭಾಷೆ ಕುಂದಾಪುರ ಕನ್ನಡವಾಗಿದೆ. ಕನ್ನಡ ಭಾಷೆ ಪ್ರಜ್ವಲಿಸಿ ಬೆಳೆಯಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಕನ್ನಡಕ್ಕೆ ಅಪಾರವಾದ ಜಾಗೃತಿ ಮೂಡಿಸುವ ಕೆಲಸ ಕಾರ್ಯವಾಗುತ್ತಿದೆ. ಮಹಾಶಿವರಾತ್ರಿಯ ದಿನವಾದ ಇಂದು ಶಿವನ ಸನ್ನಿಧಿ ಸಮೀಪ ಈ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಮಾತನಾಡಿ, ಎಲ್ಲಾ ಭಾಷೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಕನ್ನಡ ಪರಮೊಚ್ಚ ಭಾಷೆಯಾಗಿದ್ದು ಈ ಪರಂಪರೆಯನ್ನು ಮುಂದುವರಿಸಲು ಎಲ್ಲೆಡೆ ಕನ್ನಡದ ಕಂಪು ಪಸರಿಸಬೇಕು. ನಾವುಗಳು ಜಾತಿ ಧರ್ಮಗಳ ಹೆಸರಿನಲ್ಲಿ ಬೇರೆಯಾಗಬಾರದು ಎಂಬ ಭಾವನೆಯನ್ನು ಕನ್ನಡ ಪರಂಪರೆ ಬಿತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಭಾರತದಲ್ಲಿಯೇ ಅತೀ ಹೆಚ್ಚು ಹಣವನ್ನು ಕರ್ನಾಟಕ ಸರಕಾರ ನೀಡಿದೆ. ಕಲೆ-ಸಾಹಿತ್ಯದ ರಕ್ಷಣೆಗೆ ಸಿದ್ದರಾಮಯ್ಯನವರ ಸರಕಾರ ೩೦೩ ಕೋಟಿ ರೂ. ನೀಡಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆ ಕನ್ನಡದ ನೆಲವಾಗಿದ್ದು ಕನ್ನಡ ಕಟ್ಟುವ ಕೆಲಸದ ಈ ಉತ್ಸವ ಇಲ್ಲಿ ನಡೆಯುತ್ತಿರುವುದು ನಿಜಕ್ಕೂ ಉತ್ತಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೋಟೇಶ್ವರ ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಬೀಜಾಡಿ ಜಿ.ಪಂ. ಸದಸ್ಯೆ ಶ್ರೀಲತಾ ಶೆಟ್ಟಿ, ಕೋಟೇಶ್ವರ ತಾಲೂಕುಪಂಚಾಯತ್ ಸದಸ್ಯೆ ಮೀರಾ ಬಾಯಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ, ಕನ್ನಡ ಪರ ಸಂಘಟಕ ಯಾಕೂಬ್ ಖಾದರ್ ಗುಲ್ವಾಡಿ, ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಚಂದ್ರಶೇಖರ್, ಕಾಪು ದಿವಾಕರ್ ಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ್ ಉಪಸ್ಥಿತರಿದ್ರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಾನಪದ ಕಲಾತಂಡಗಳಿಂದ ಪ್ರದರ್ಶನಗಳು ನಡೆದವು.