ಬೆಂಗಳೂರು: ಬಜೆಟ್ ಅಧಿವೇಶನದ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಬದಲಾವಣೆಯಾಗಲಿದೆ ಎಂಬುದು ಕೇವಲ ಊಹಾಪೋಹ. ನಾಯಕತ್ವ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ದಲಿತ ಮುಖಂಡರ ಬಜೆಟ್ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಲ್ಲಾ ಶಾಸಕರ ಸಂಪೂರ್ಣ ಬೆಂಬಲ ಇದೆ. ಹೈಕಮಾಂಡ್ ಸಹ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದೆ. ನಾಯಕತ್ವ ಬದಲಾವಣೆಯ ಸುಳಿವು ಕೂಡ ಇಲ್ಲ ಎಂದರು. ನಾಯಕತ್ವ ಬದಲಾವಣೆಯ ವರದಿಗಳು ಊಹಾ ಪೋಹಾದಿಂದ ಕೂಡಿದೆ. ಸಿದ್ದರಾಮಯ್ಯನವರು ಪೂರ್ಣಾವಧಿ ಪೂರೈಸುತ್ತಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ದಲಿತ ಮುಖಂಡರ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು. ಈ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ, ದಲಿತ ಕವಿ ಸಿದ್ದಲಿಂಗಯ್ಯ, ಮಾರಸಂದ್ರ ಮುನಿಯಪ್ಪ, ಶ್ರೀಧರ ಕಲ್ಲವೀರ, ವೆಂಕಟಸ್ವಾಮಿ, ಮಾವಳ್ಳಿ ಶಂಕರ್, ಲಕ್ಷ್ಮಿ ನಾರಾಯಣ ನಾಗವಾರ ಸೇರಿದಂತೆ ಹಲವು ದಲಿತ ಮುಖಂಡರು ಪಾಲ್ಗೊಂಡಿದ್ದರು.