ಬೆಂಗಳೂರು: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಬಂಧನ ಪ್ರಕರಣದಲ್ಲಿ ಆರೆಸ್ಸೆಸ್ಸ್ ಕೈವಾಡ ಇದೆ ಎಂದು ಜೆಎನ್ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಆರೋಪಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿಂದು ಪತ್ರಕರ್ತರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ಹಯ್ಯಾ ಕುಮಾರ್ ಪ್ರಕರಣದಲ್ಲಿ ಆರೆಸ್ಸೆಸ್ಸ್ ಕೈವಾಡ ಇದೆ. ಅಫ್ಜಲ್ ಗುರು ಬಗ್ಗೆ ನಾವು ಮೃದು ಧೋರಣೆ ತಳೆದಿಲ್ಲ. ವಿನಾ ಕಾರಣ ನಮ್ಮ ಮೇಲೆ ಗೂಬೆ ಕೂರಿಸಲಾಗಿದೆ ಎಂದರು.
ಜೆಎನ್ಯು ಕ್ಯಾಂಪಸ್ ಒಳಗೆ ಆರೆಸ್ಸೆಸ್ಸ್ ಮಧ್ಯ ಪ್ರವೇಶ ಮಾಡಿ ವಿದ್ಯಾರ್ಥಿಗಳ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದು ಸರಿಯಲ್ಲ. ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳು, ಸಂವಿಧಾನದ ಇತಿಮಿತಿಯೊಳಗೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
ದೇಶದಲ್ಲಿ ಹಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳು ಸಕ್ರೀಯವಾಗಿ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವುದು ತಪ್ಪಾ ಎಂದವರು ಪ್ರಶ್ನಿಸಿದರು.
ಕನ್ಹಯ್ಯಾ ಕುಮಾರ್ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ಸಮಾಜವಾದಿ ಚಿಂತನೆಯ ಬಗ್ಗೆ ಮಾತನಾಡಿದರೆ ಸಂಘ ಪರಿವಾರಕ್ಕೆ ಆಗುವುದಿಲ್ಲ. ದೇಶದ ಆದಿವಾಸಿಗಳು, ಪರಿಶಿಷ್ಠರು, ಬಡವರು ಹಕ್ಕು ಕೇಳುವುದು ತಪ್ಪೇ? ಕನ್ಹಯ್ಯಾ ಕುಮಾರ್ ಕೇಳಿದ್ದು ಇದನ್ನೇ. ಇದಕ್ಕೆ ಇಷ್ಟೆಲ್ಲಾ ರಾದ್ಧಾಂತ ಮಾಡಲಾಗಿದೆ ಎಂದವರು ಕಿಡಿ ಕಾರಿದರು.
ದೇಶದ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಚಿಂತನೆ ಮೂಡಿಸುವ ಕೆಲಸವನ್ನು ಆರೆಸ್ಸೆಸ್ಸ್ ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದು ಹೆಚ್ಚಾಗಿದೆ ಎಂದರು.
ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾದರೆ ಎಲ್ಲವೂ ಬಯಲಾಗುತ್ತದೆ. ಜನಪರ ಸಮಸ್ಯೆಗಳಿಗೆ ಧ್ವನಿ ಎತ್ತುತ್ತಿರುವ ಎಡಪಂಥೀಯರನ್ನು ಹತ್ತಿಕ್ಕುತ್ತಿರುವ ವಿಚಾರ ತಲೆ ತಗ್ಗಿಸುವಂತದ್ದು. ಕೇಂದ್ರ ಸರ್ಕಾರ ನಿರಂಕುಶಧಾರಿಯಂತೆ ನಡೆದುಕೊಳ್ಳುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರತಿಕೂಲ ವಾತಾವರಣದಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ಬಗ್ಗೆ ಜೆಎನ್ಯು ವಿದ್ಯಾರ್ಥಿಗಳಿಗೆ ಅಪಾರ ಗೌರವ ಇದೆ. ಸೈನಿಕರು ಭಾರತ- ಪಾಕಿಸ್ತಾನದ ರಾಜಕಾರಣಿಗಳ ರಾಜಕೀಯದಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅವರು ದೂರಿದರು.
ಬಿಜೆಪಿ ಮತ್ತು ಆರೆಸ್ಸೆಸ್ಸ್ ನಿಂದ ಜೆಎನ್ಯು ವಿದ್ಯಾರ್ಥಿಗಳು ದೇಶದ್ರೋಹದ ಪ್ರಮಾಣಪತ್ರ ಪಡೆಯಬೇಕಿಲ್ಲ. ನಮಗೂ ದೇಶದ ಬಗ್ಗೆ ಬದ್ಧತೆ ಇದೆ. ಅನಗತ್ಯವಾಗಿ ಕನ್ಹಯ್ಯಾ ಕುಮಾರ್ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಟೀಕಿಸಿದರು.