ನವದೆಹಲಿ (ಪಿಟಿಐ): ‘ಜೈಲಿಗೆ ಹೋಗಲು ಸಿದ್ಧ; ಆದರೆ ದಂಡ ಕಟ್ಟುವುದಿಲ್ಲ’ ಎಂಬ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಹೇಳಿಕೆಯ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಯಾರೇ ಈ ರೀತಿ ಮಾತನಾಡಿದರೂ ಕಾನೂನನ್ನು ಧಿಕ್ಕರಿಸಿದಂತಾಗುತ್ತದೆ. ಆದ್ದರಿಂದ ರವಿಶಂಕರ್ ಗುರೂಜಿ ಅವರೂ ಕಾನೂನು ಧಿಕ್ಕರಿಸಿದ್ದಾರೆ ಎಂದು ಪರಿಗಣಿಸಿ ಕಾನೂನಿನಂತೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಅದು ಎಚ್ಚರಿಕೆ ನೀಡಿದೆ. ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನ ದೆಹಲಿಯಲ್ಲಿ ನಡೆಸುತ್ತಿರುವ ವಿಶ್ವ ಸಂಸ್ಕೃತಿ ಮೇಳಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಎನ್‌ಜಿಟಿ, ₹ 5 ಕೋಟಿ ಕಟ್ಟುವಂತೆ ಪ್ರತಿಷ್ಠಾನಕ್ಕೆ ಸೂಚಿಸಿತ್ತು. ಇದನ್ನು ರವಿಶಂಕರ್ ಗುರೂಜಿ ಆಕ್ಷೇಪಿಸಿದ್ದರು.
ಗಡುವು ವಿಸ್ತರಣೆ: ತಮ್ಮದು ಧಾರ್ಮಿಕ ಸಂಸ್ಥೆಯಾಗಿರುವುದರಿಂದ ₹ 5 ಕೋಟಿಯಷ್ಟು ದೊಡ್ಡ ಮೊತ್ತದ ಹಣವನ್ನು ಕಡಿಮೆ ಸಮಯದಲ್ಲಿ ಹೊಂದಿಸಲು ಸಾಧ್ಯವಾಗುವುದಿಲ್ಲ’ ಎಂಬ ಆರ್ಟ್ ಆಫ್ ಲಿವಿಂಗ್ ಕೋರಿಕೆಯನ್ನು ಮನ್ನಿಸಿದ ನ್ಯಾಯ ಮಂಡಳಿ, ತಕ್ಷಣ ₹ 25 ಲಕ್ಷ ಪಾವತಿ ಮಾಡಿ ಉಳಿದ ಮೊತ್ತ ಕಟ್ಟಲು 3 ವಾರ ಕಾಲಾವಕಾಶ ನೀಡಿತು. ₹25 ಲಕ್ಷ ಕಟ್ಟದೆ ಇದ್ದರೆ ಸರ್ಕಾರ ಪ್ರತಿಷ್ಠಾನಕ್ಕೆ ಮಂಜೂರು ಮಾಡಿರುವ ₹ 2.5 ಕೋಟಿ ಅನುದಾನ ಮುಟ್ಟುಗೋಲು ಹಾಕಲಾಗುತ್ತದೆ ಎಂದು ಎಚ್ಚರಿಸಿತು.