ನವದೆಹಲಿ: ವಿಶ್ವ ಸಂಸ್ಕೃತಿ ಉತ್ಸವವನ್ನು ಕುಂಭ ಮೇಳಕ್ಕೆ ಹೋಲಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಸಂಸ್ಕೃತಿಯ ಕುಂಭ ಮೇಳ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿಯ ಯಮುನಾ ನದಿ ತಟದ ಮೇಲೆ ‘ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಯೋಜಿಸಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಒಂದು ವೇಳೆ ನಮ್ಮನ್ನು ನಾವೇ ನಿಂದಿಸಿಕೊಳ್ಳುವುದಾದರೆ ಜಗತ್ತು ಏಕೆ ನಮ್ಮನ್ನು ನೋಡಬೇಕು ಎಂದು ಪ್ರಶ್ನಿಸಿದ್ದಾರೆ.
ಸುಮಾರು 150ಕ್ಕೆ ಹೆಚ್ಚು ದೇಶಗಳಿಗೆ ಸಂದೇಶ ಸಾರಿ, ವಿಶ್ವಮಟ್ಟದ ವೇದಿಕೆಯಲ್ಲಿ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರುವುದಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದರು.
ಇನ್ನು ಇದಕ್ಕೂ ಮುನ್ನ ಮಾತನಾಡಿದ ರವಿಶಂಕರ್ ಗುರೂಜಿ ಅವರು, ಇಡೀ ವಿಶ್ವ ಒಂದೇ ಕುಟುಂಬ ಎಂಬ ಸಂದೇಶ ಸಾರಲು ವಿವಿಧ ದೇಶಗಳ ನಾಗರಿಕರು ಇಂದು ಒಂದೇ ಕಡೆ ಸೇರಿದ್ದಾರೆ ಎಂದರು.
ಇದೇ ವೇಳೆ ತಮ್ಮ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮ ಎಂಬ ಟೀಕೆಗೂ ಉತ್ತರಿಸಿದ ರವಿಶಂಕರ್ ಗುರೂಜಿ, ಇದು ಖಾಸಗಿ ಕಾರ್ಯಕ್ರಮ ಅಲ್ಲ. ಇದು ಇಡೀ ವಿಶ್ವಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮ ಎಂದರು.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಸುಮಾರು 155 ದೇಶಗಳ ಭಕ್ತರು ಭಾಗವಹಿಸುತ್ತಿದ್ದು, ವಿಶ್ವದ ಸುಮಾರು 36 ಸಾವಿರ ಕಲಾವಿದರು ಈ ಸಂಸ್ಕೃತಿ ಮೇಳದಲ್ಲಿ ಪ್ರದರ್ಶನ ನೀಡಲಿದ್ದಾರೆ.
ವಿಶ್ವ ಸಂಸ್ಕೃತಿ ಉತ್ಸವದಿಂದ ಪರಿಸರ ನಾಶವಾಗುತ್ತದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 5 ಕೋಟಿ ರುಪಾಯಿ ದಂಡ ಸೇರಿದಂತೆ ಕೆಲವು ಷರತ್ತಿನೊಂದಿಗೆ ವಿಶ್ವ ಸಂಸ್ಕೃತಿ ಉತ್ಸವ ನಡೆಸಲು ಅನುಮತಿ ನೀಡಿದೆ.