ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಉಡುಗೊರೆಯಂದರೆ, ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಎಂದು ಕಾಂಗ್ರೆಸ್ ಹೇಳಿದೆ.
ಲೋಕಸಭಾ ಚುನಾವಣೆಯಲ್ಲಿ ಭಾರಿ ಯಶಸ್ಸು ಗಳಿಸಿದ ಮೋದಿ, ಅದರ ಫಲವಾಗಿ ದೇಶಕ್ಕೆ ಲಲಿತ್ ಮೋದಿ ಮತ್ತು ವಿಜಯ ಮಲ್ಯ ಅವರಂತಹವರನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುಜ್ರೇವಾಲ ಹೇಳಿದ್ದಾರೆ.
ವಿಜಯ್ ಮಲ್ಯ ದೇಶ ಬಿಟ್ಟು ಹೋಗುವುದರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಪಾತ್ರವಿದೆ ಎಂದು ಅವರು ಆರೋಪಿಸಿದ್ದಾರೆ.
ವಿಜಯ್ ಮಲ್ಯ ವಿರುದ್ಧ ಸಿಬಿಐ 2015 ಜುಲೈ 29ರಂದು ಎಫ್ ಐಆರ್ ದಾಖಲಿಸಿತ್ತು. ನಂತರ ಎಲ್ಲಾ ರೀತಿಯ ತನಿಖೆಯನ್ನು ನಡೆಸಲಾಗಿತ್ತು. ಆದರೆ, ಮಲ್ಯರನ್ನು ಮಾತ್ರ ಬಂಧಿಸಿಲ್ಲ. 2015 ಅಕ್ಟೋಬರ್ 12ರಂದು ಮಲ್ಯ ಬಂಧನಕ್ಕೆ ಲುಕೌಟ್ ನೋಟೀಸ್ ಜಾರಿ ಮಾಡಲಾಗಿತ್ತು. 2015 ನವೆಂಬರ್ 23ರಂದು ಅದನ್ನು ಏಜೆನ್ಸಿ, ಬಂಧನದ ನೋಟೀಸ್ ಅಲ್ಲ, ಮಾಹಿತಿ ನೋಟೀಸ್ ಎಂದು ಪರಿವರ್ತಿಸಿತ್ತು ಎಂದು ಸುಜ್ರೇವಾಲಾ ತಿಳಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ತಿಳಿಯುವುದೇನೆಂದರೆ, ಮಲ್ಯ ದೇಶ ಬಿಟ್ಟು ಹೋಗಲು ಕೇಂದ್ರ ಸರ್ಕಾರ ಪಾತ್ರವಿದೆ ಎಂಬುದು. ಇಲ್ಲವಾದರೆ, ಮಲ್ಯ ದೇಶ ಬಿಟ್ಟು ಹೋಗಲು ಯಾರು ಸಹಾಯ ಮಾಡಿದರೂ ಎಂಬ ಬಗ್ಗೆ ಕೇಂದ್ರ ಮಾಹಿತಿ ನೀಡಲಿ ಹಾಗೂ ಮಲ್ಯರಿಂದ ಸಾಲ ವಸೂಲಿ ಮಾಡುತ್ತದೇಯೇ ಎಂಬುದನ್ನು ತಿಳಿಸಲಿ ಎಂದು ಅವರು ಸವಾಲು ಕಿಡಿ ಕಾರಿದ್ದಾರೆ.