ನಾಗೌರ್(ರಾಜಸ್ಥಾನ): ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ದೇಶ ವಿರೋಧಿ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿದ್ದ ಬೆನ್ನಲ್ಲೇ, ವಿಶ್ವವಿದ್ಯಾಲಯಗಳಲ್ಲಿನ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಪರಿಶೀಸಿಲಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಕೇಳಿಕೊಂಡಿದೆ. ಅಲ್ಲದೆ ಜೆಎನ್ ಯುನಲ್ಲಿನ ದೇಶ ವಿರೋಧಿ ಘೋಷಣೆಗಳನ್ನು ಸಹಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದೆ.
ರಾಷ್ಟ್ರ ವಿರೋಧಿ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ವಿವಿಗಳು ರಾಜಕೀಯ ಕೇಂದ್ರವಾಗುವುದನ್ನು ತೆಡಯಬೇಕು ಎಂದು ಆರ್ ಎಸ್ ಎಸ್ ತನ್ನ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಒತ್ತಾಯಿಸಿದೆ.
ಜೆಎನ್ ಯು ವಿವಾದ ಹಾಗೂ ಹೈದರಾಬಾದ್ ವಿವಿಯ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ಶಿಕ್ಷಣವನ್ನು ಕೇಶರಿಕರಣಗೊಳಿಸುತ್ತದೆ ಎಂಬ ಆರೋಪ ಎದುರಿಸುತ್ತಿರುವ ಸಂದರ್ಭದಲ್ಲೇ ನಡೆಯುತ್ತಿರುವ ಬಿಜೆಪಿಯ ಮಾತೃ ಸಂಘಟನೆ ಪ್ರತಿನಿಧಿ ಸಭೆ ಮಹತ್ವ ಪಡೆದುಕೊಂಡಿದೆ.
ಸಭೆಯ ಆರಂಭದ ದಿನವಾದ ಇಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.