ಮುಂಬಯಿ : ತಾನು ಬಾಲ್ಯದಲ್ಲಿ ತನ್ನ ಮಲ ತಂದೆಯ ಸಂಬಂಧಿಯೋರ್ವನಿಂದ ಹೇಗೆ ಲೈಂಗಿಕ ಶೋಷಣೆಗೆ ಗುರಿಯಾಗಿದ್ದೆ ಎಂದು ಸಲ್ಮಾನ್ ರಶ್ದಿ ಮಾಜಿ ಪತ್ನಿ ಪದ್ಮ ಲಕ್ಷ್ಮಿ ತನ್ನ ಆತ್ಮಚರಿತ್ರೆಯ ವಿವರಿಸಿದ್ದಾಳೆ.
ಲವ್, ಲಾಸ್ ಆ್ಯಂಡ್ ವಾಟ್ ವಿ ಏಟ್ ‘ ಎನ್ನುವ ತನ್ನ ಆತ್ಮಚರಿತ್ರೆಯಲ್ಲಿ ತನ್ನ ಮಾಜಿ ಪತಿ ಸಲ್ಮಾನ್ ರಶ್ದಿ ತನ್ನನ್ನು ಹೇಗೆ ಲೈಂಗಿಕವಾಗಿ ಶೋಷಿಸುತ್ತಿದ್ದ ಮತ್ತು ಆತ ಹೇಗೆ ತನ್ನ ಪಾಲಿಗೆ ನಿಷ್ಕರುಣೆಯ ಕಾಮ ಪೀಡಕನಾಗಿದ್ದ ಎಂಬುದನ್ನು ಜಗಜ್ಜಾಹೀರು ಮಾಡಿರುವ ಪದ್ಮ ಲಕ್ಷ್ಮೀ, ತನ್ನ ಅಮಾಯಕ ಬಾಲ್ಯದ ಅತೀವ ಮುಗ್ಧತೆಯ ದಿನಗಳಲ್ಲಿ ತನ್ನ ಮಲ ತಂದೆಯ ಸಂಬಂಧಿಯೊಬ್ಬ ತನ್ನ ಮೇಲೆ ಎಸಗಿದ ಲೈಂಗಿಕ ಶೋಷಣೆಯನ್ನು ಕೃತಿಯಲ್ಲಿ ಚಿತ್ರಿಸಿದ್ದಾಳೆ.
ಅದೊಂದು ರಾತ್ರಿ ನಾನು ಥಟ್ಟನೆ ಎಚ್ಚರವಾದೆ. ಆತನ ಕೈ ನನ್ನ ಒಳ ಉಡುಪಿನೊಳಗೆ ಇರುವುದು ನನ್ನ ಅನುಭವಕ್ಕೆ ಬಂತು. ಆತ ನಿಧಾನಕ್ಕೆ ನನ್ನ ಕೈಯನ್ನು ಬರಸೆಳೆದು ತನ್ನ ಒಳಉಡುಪಿನೊಳಗೆ ಸೇರಿಸಿಕೊಂಡ. ನನ್ನ ಮಟ್ಟಿಗೆ ಆ ರಾತ್ರಿ ಮೌನವೇ ಹೆಪ್ಪುಗಟ್ಟಿದಂತಿತ್ತು. ನಾನು ಉಸಿರೆತ್ತುವ ಸ್ಥಿತಿಯಲ್ಲೇ ಇರಲಿಲ್ಲ. ಅದಾಗಿ ಈ ರೀತಿಯಲ್ಲಿ ಎಷ್ಟು ರಾತ್ರಿಗಳು ಕಳೆದು ಹೋಗಿವೆಯೋ ಗೊತ್ತಿಲ್ಲ. ಏಕೆಂದರೆ ಈ ಬಗೆಯ ಘಟನೆಗಳು ಮತ್ತೆ ಮತ್ತೆ ನಡೆದ ಎಷ್ಟೋ ರಾತ್ರಿಗಳಲ್ಲಿ ನಾನು ನಿದ್ದೆಯಲ್ಲಿ ಅಥವಾ ಅರೆ ನಿದ್ದೆಯಲ್ಲಿ ಇದ್ದೆ.
ಒಂದು ಬಾರಿ ನೀವು ಹುಡುಗಿಯೊಬ್ಬಳ ಮುಗ್ಧತೆಯನ್ನು ತೆಗೆದುಕೊಂಡು ಬಿಟ್ಟಿರೋ, ಆ ಮೇಲೆ ಅದನ್ನು ಆಕೆಯ ಮರಳಿ ಪಡೆಯುವ ಮಾತೇ ಇಲ್ಲ. ನಾನು ಈ ಘಟನೆಯನ್ನು ನನ್ನ ತಾಯಿಗೆ ಹೇಳಿದ್ದೆ. ಆಕೆ ಅದನ್ನು ನಂಬಿದ್ದಳು ಮತ್ತು ನಾವಿಬ್ಬರೂ ಈ ಘಟನೆಯನ್ನು ಬೇರೆಯವರಲ್ಲೂ ಹೇಳಿಕೊಂಡಿದ್ದೆವು. ಆದರೆ ನನ್ನ ಮೇಲೆ ಲೈಂಗಿಕ ಶೋಷಣೆ ಎಸಗಿದ ಆ ವ್ಯಕ್ತಿ ಮಾತ್ರ ನನ್ನನ್ನು ನಂಬಲು ಸಾಧ್ಯವೇ ಇಲ್ಲವೆಂಬಂತೆ ನಟಿಸಿದ.
ಈ ಘಟನೆ ನಂತರ ನನ್ನನ್ನು ಭಾರತಕ್ಕೆ ಕಳುಹಿಸಲಾಯಿತು. ಈ ಘಟನೆಗಳೆಲ್ಲ ನಡೆದು ವರ್ಷಗಳ ಅನಂತರ ನನ್ನ ತಾಯಿ ತಾನು ಭಾರೀ ದೊಡ್ಡ ತಪ್ಪು ಮಾಡಿದೆನೆಂದು ಕಣ್ಣೀರು ಹಾಕಿ ಒಪ್ಪಿಕೊಂಡಳು. ಪದ್ಮಲಕ್ಷ್ಮೀ ಬರೆದಿರುವ ತನ್ನ ಆತ್ಮಚರಿತ್ರೆಯ ಕೃತಿಯಿಂದ ಈ ಅಂಶಗಳನ್ನು ಉಲ್ಲೇಖಿಸಿ ಡಿಎನ್ಎ ವರದಿ ಮಾಡಿದೆ.