ಲಿವರ್‌ಪೂಲ್: ಹಾವಿನ ರಕ್ತ ಕುಡಿದು ಭಾರತದ ಬಾಕ್ಸರ್ ನನ್ನು ಸೋಲಿಸುವುದಾಗಿ ಬೊಬ್ಬಿರಿಯುತ್ತಿದ್ದ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವ್ರಾತ್ ವಿರುದ್ಧ ವಿಜೇಂದರ್ ಸಿಂಗ್ ನಿರಾಯಾಸವಾಗಿ ಜಯಸಾಧಿಸಿದ್ದಾರೆ.
ವೃತ್ತಿಪರ ಬಾಕ್ಸಿಂಗ್ ಕಣದಲ್ಲಿ ಪ್ರಬಲ ಸ್ಪಧಿಯಾಗಿ ಗೋಚರಿಸುತ್ತಿರುವ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಶನಿವಾರ ರಾತ್ರಿ ನಡೆದ ತಮ್ಮ ನಾಲ್ಕನೇ ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವ್ರಾತ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಲಿವರ್‌ಪೂಲ್‌ನ ಎಕೋ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ಹಾವಿನ ರಕ್ತ ಕುಡಿದು ಪಂದ್ಯ ಗೆಲ್ಲುವುದಾಗಿ ಹೇಳಿಕೊಂಡಿದ್ದ ಹೊವ್ರಾತ್ ರನ್ನು ಕೇವಲ ಮೂರೇ ಸುತ್ತುಗಳಲ್ಲಿ ನೆಲಕ್ಕುರುಳಿಸಿದ ವಿಜೇಂದರ್ ಅಜೇಯರಾಗಿ ಮುಂದುವರಿದಿದ್ದಾರೆ.
ವಿಜೇಂದರ್‌ಗಿಂತ ಕಣದಲ್ಲಿ ಅನುಭವಿಯಾಗಿದ್ದ ಹೊರ್ವಾತ್, ಈ ಪಂದ್ಯಕ್ಕಾಗಿ ಭೋಜನದ ವೇಳೆ ಹಾವಿನ ರಕ್ತ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದರು. ಆದರೆ, ಹೊವ್ರಾತ್ ಪ್ರಯತ್ನವನ್ನೆಲ್ಲಾ ಮಣ್ಣು ಪಾಲು ಮಾಡಿದ ವಿಜೇಂದರ್ ತಮ್ಮ ಬಲಾಢ್ಯ ಹೊಡೆತಗಳಿಂದ ಹೊವ್ರಾತ್ ಅವರನ್ನು ಮಣಿಸಿದರು. ಹಿಂದಿನ ಮೂರೂ ಪಂದ್ಯಗಳಂತೆ ಮೊದಲ ಸುತ್ತಿನಲ್ಲಿ ತಾಳ್ಮೆಯ ಆಟವಾಡಿದ ವಿಜೇಂದರ್ ಎದುರಾಳಿಯನ್ನು ಕೆಣಕುವ ಒಂದೆರಡು ಪ್ರಯತ್ನ ನಡೆಸಿದರು. ಇದರಿಂದಾಗಿ ಅಲೆಂಕ್ಸಾಂಡರ್ ಪಂಚ್ ಮಾಡಲು ಮುಂದೆ ಬರುವ ಸಮಯದಲ್ಲಿ ತಮ್ಮ ಚಾಣಾಕ್ಷ ಆಟ ಪ್ರದರ್ಶಿಸಿ ನಿಖರವಾದ ಪಂಚ್‌ಗಳನ್ನು ಅವರ ಮುಖಕ್ಕೆ ನೀಡುತ್ತಿದ್ದರು. ಆ ಮೂಲಕ ವಿಜೇಂದರ್ ಮೊದಲ ಸುತ್ತಿನಲ್ಲೇ ಕೆಲ ಅಂಕ ಕಲೆಹಾಕಿ ಪ್ರಾಬಲ್ಯ ಮೆರೆದರು.
ಮೊದಲ ಸುತ್ತಿನಲ್ಲಿ ಹೊರ್ವಾತ್ ಚಲನೆಯನ್ನು ಗಮನಿಸಿ ಉತ್ತಮ ಪೈಪೋಟಿ ನೀಡುವ ವಿಶ್ವಾಸದಲ್ಲಿದ್ದ ವಿಜೇಂದರ್ 2ನೇ ಸುತ್ತಿನಲ್ಲಿ ಮತ್ತಷ್ಟು ಶಾಂತವಾಗಿ ರಿಂಗ್‌ನಲ್ಲಿ ಕಾಣಿಸಿಕೊಂಡರು. ವಿಜೇಂದರ್ ಹೊರ್ವಾತ್‌ಗಿಂತ ಎತ್ತರವಿದ್ದು, ಇದರ ಲಾಭ ಪಡೆದ ಅವರು ಆಕ್ರಮಣಕಾರಿ ಪಂಚ್‌ಗಾಗಿ ಕೆಲ ಸಮಯ ಕಾದರು. ಇದರಿಂದಾಗಿ ವಿಜೇಂದರ್ ಬಾರಿಸಿದ ಕೆಲ ಹೊಡೆತಗಳಲ್ಲಿ ಹೊರ್ವಾತ್‌ರ ಮೌತ್‌ಪೀಸ್‌ಗಳು ಪದೇ ಪದೇ ಕೆಳಗಿರುಳಿದವು. 3ನೇ ಸುತ್ತಿನಲ್ಲಿ ವಿಜೇಂದರ್‌ರ ನೇರ ಹಾಗೂ ನಿಖರ ಪಂಚ್‌ಗಳು ಹಂಗೆರಿ ಬಾಕ್ಸರ್‌ನ ಬೆವರಿಳಿಸಿದವು. ಹೊರ್ವಾತ್ ಗಾಳಿಯಲ್ಲಿ ಪಂಚ್‌ಗಳನ್ನು ನೀಡಿದರೆ, ವಿಜಿ ಹೊಡೆತಗಳು ನೇರವಾಗಿ ಹೊರ್ವಾತ್‌ರ ಮುಖಕ್ಕೆ ಬಿದ್ದವು. 3ನೇ ಸುತ್ತು ಆರಂಭವಾಗಿ 1 ನಿಮಿಷ ಕಳೆಯುವ ವೇಳೆಗೆ ವಿಜಿ ಬಾರಿಸಿದ ಬಲಿಷ್ಠ ಪಂಚ್ ವೊಂದು ಹಂಗೇರಿ ಬಾಕ್ಸರ್ ಹೊರ್ವಾತ್‌ರ ಎಡಭುಜಕ್ಕೆ ಬಲವಾಗಿ ತಾಕಿತು. ಭುಜಕ್ಕೆ ಬಿದ್ದ ಪೆಟ್ಟಿಗೆ ಸುಸ್ತಾದ ಹೊರ್ವಾತ್‌ಗೆ ರೆಫ್ರಿ ಕೌಂಟ್ ನೀಡಲು ಆರಂಭಿಸಿದರು. ಈ ವೇಳೆ ಎದ್ದುನಿಲ್ಲಲು ವಿಫಲರಾದ ಹೊರ್ವಾತ್ ಪಂದ್ಯ ಮುಂದುವರಿಸಲು ನಿರಾಕರಿಸಿದರು. ಇದರಿಂದಾಗಿ ವಿಜೇಂದರ್‌ರನ್ನು ವಿಜಯಿ ಎಂದು ರೆಫ್ರಿ ಘೋಷಿಸಿದರು.
ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ನಾಕೌಟ್‌ನಲ್ಲಿ ಜಯ ಸಾಧಿಸಿದ್ದಾರೆ. ಕಳೆದ ವರ್ಷ ಸೋನಿ ವೈಟಿಂಗ್, ಡೀನ್ ಗಿಲ್ಲೆನ್ ಹಾಗೂ ಸಮೆಟ್ ಹಸಿನೋವ್ ವಿರುದ್ಧ ನಾಕೌಟ್ ಮೂಲವೇ ಜಯ ಕಂಡಿದ್ದರು.