ಮಂಗಳೂರು,ಮಾ.17 : ಭ್ರಷ್ಟಾಚಾರ ನಿಗ್ರಹದಳವನ್ನು ರಚಿಸುವ ಪ್ರಸ್ತಾಪ ಮಾಡುವ ಮೂಲಕ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಬಾರದು. ಬದಲಿಗೆ ಲೋಕಾಯುಕ್ತವನ್ನು ಇನ್ನಷ್ಟು ಬಲಪಡಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೂಜಾರಿ ಹೇಳಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಶಾಸಕರು, ಸಚಿವರು, ಮುಖ್ಯಮಂತ್ರಿ ಸೇರಿದಂತೆ ಇವರೆಲ್ಲರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಈಗ ಇರುವ ಕಾನೂನಿನಲ್ಲಿ ಅವಕಾಶವಿರುವಾಗ ಭ್ರಷ್ಟಾಚಾರ ನಿಗ್ರಹದಳವನ್ನು ರಚಿಸುವ ಪ್ರಸ್ತಾಪ ಅನಗತ್ಯ. ಈ ಬಗ್ಗೆ ಗೊಂದಲಗಳಿದ್ದಲ್ಲಿ ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳ ಸಲಹೆಯನ್ನು ಸರಕಾರ ಪಡೆದುಕೊಳ್ಳಬಹುದು ಎಂದು ಹೇಳಿದರು.
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯು ನ್ಯಾ.ವೆಂಕಟಾಚಲ, ನ್ಯಾ.ಸಂತೋಷ್ ಹೆಗ್ಡೆಯವರ ಅವಧಿಯಲ್ಲಿ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು. ಆದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆರೋಪ ಎದುರಿಸುತ್ತಿರುವ ನ್ಯಾ.ಭಾಸ್ಕರ್ರಾವ್ ಅವರನ್ನು ನೇಮಕ ಮಾಡಿ ಅದರ ಘನತೆಗೆ ಧಕ್ಕೆಯಾಗುವಂತೆ ಮಾಡಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಲೋಕಾಯುಕ್ತ ಉತ್ತಮ ಹೆಸರು ಪಡೆದಿದೆ ಎಂದು ಪೂಜಾರಿ ತಿಳಿಸಿದರು.
ಆಮಂತ್ರಣ ಪತ್ರದಲ್ಲಿ ಜಿಲ್ಲಾಧಿಕಾರಿ ಹೆಸರು : ವಿವಾದ ಸರಿಯಲ್ಲ
ಹಿಂದು, ಮುಸ್ಲಿಮ್, ಕ್ರೈಸ್ತರು ಎಲ್ಲರೂ ದೇವರ ಮಕ್ಕಳೇ. ಪುತ್ತೂರು ಜಾತ್ರೆಯ ಆಮಂತ್ರಣ ಪತ್ರದಲ್ಲಿ ಜಿಲ್ಲಾಧಿಕಾರಿಯ ಹೆಸರು ನಮೂದಿಸಿರುವುದನ್ನು ವಿವಾದ ಮಾಡುವುದು ಸರಿಯಲ್ಲ. ಕುದ್ರೋಳಿಯಲ್ಲಿ ಖಾಸಗಿ ಆಡಳಿತ ಮಂಡಳಿಯ ದೇವಸ್ಥಾನದಲ್ಲಿ ಎಲ್ಲರಿಗೂ ಪ್ರವೇಶ ನೀಡಿದ್ದೇವೆ. ಸಮಾಜದ ಎಲ್ಲ ವರ್ಗದ ಎಲ್ಲ ಸಮುದಾಯದ ಜನರು ಭಾಗವಹಿಸಿದ್ದಾರೆ. ಪುತ್ತೂರು ಜಾತ್ರೆಯಲ್ಲೂ ಆ ಸೌಹಾರ್ದದ ಪರಿಪಾಠ ಬೆಳೆಯಬೇಕು ಎಂದು ಪೂಜಾರಿ ಹೇಳಿದರು.
ಪುತ್ತೂರು ಜಾತ್ರೆಗೆ ಮುಜರಾಯಿ ಇಲಾಖೆಯ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಭಾಗವಹಿಸಿದರೆ ಹೇಗೆ ತಪ್ಪಾಗುತ್ತದೆ ಎಂದು ಪ್ರಶ್ನಿಸಿದ ಪೂಜಾರಿ, ಸಂವಿಧಾನದ ಆದರ್ಶ ಪಾಲನೆ ಮಾಡುವುದನ್ನು ಬಿಟ್ಟು ಮುಸ್ಲಿಮ್, ಕ್ರೈಸ್ತ, ಜೈನ ಎಂದೆಲ್ಲಾ ದೂರ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಮೇಯರ್ ಮಹಾಬಲ ಮಾರ್ಲ, ಲ್ಯಾನ್ಸಿಲಾಟ್ ಪಿಂಟೊ, ಉಮೇಶ್ಚಂದ್ರ, ಪುರುಷೋತ್ತಮ ಚಿತ್ರಾಪುರ,ಟಿ.ಕೆ.ಸುಧೀರ್, ಫಾರೂಕ್ ಉಳ್ಳಾಲ್, ವಿಶ್ವಾಸ್ ದಾಸ್, ವಿನಯ ರಾಜ್ ,ಅರುಣ್ ಕುವೆಲ್ಲೊ,ಕೇಶವ ಮರೋಳಿ,ಸಲಾಂ ಕುದ್ರೋಳಿ,ಸರಳ ಕರ್ಕೇರಾ,ಆರಿಫ್ ಬಾವ, ಚೇತನ್ ಬಂಗೇರಾ ,ರಮಾನಂದ ಪೂಜಾರಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.