ಬೆಂಗಳೂರು: ಶಿವಲಿಂಗ ಚಿತ್ರದ ಯಶಸ್ಸಿನಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಬೆಳಗ್ಗೆ ತಮ್ಮನ ಕುಟುಂಬಸ್ಥರೊಂದಿಗೆ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ.
ಲಂಡನ್‍ನಲ್ಲಿ ಮಾರ್ಚ್ 19 ರಂದು ಶಿವಲಿಂಗ ಚಿತ್ರದ ಪ್ರಿಮಿಯರ್ ಶೋ ಹಮ್ಮಿಕೊಳ್ಳಲಾಗಿದೆ, ಕನ್ನಡ ಚಿತ್ರರಂಗದಲ್ಲಿ ಶಿವಣ್ಣ 30 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅನಿವಾಸಿ ಕನ್ನಡಿಗರಿಂದ ಲಂಡನ್‍ನಲ್ಲಿ ಶಿವರಾಜ್‍ಕುಮಾರ್‌ಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 9.30 ರ ವೇಳೆಗೆ ಎಮಿರೆಟ್ಸ್ ವಿಮಾನದಲ್ಲಿ ಶಿವರಾಜ್‍ಕುಮಾರ್ ಲಂಡನ್‍ಗೆ ತೆರಳಿದ್ರು. ಪತ್ನಿ ಗೀತಾ ಶಿವರಾಜ್‍ಕುಮಾರ್, ಮಗಳು ನಿರುಪಮಾ, ಅಳಿಯ ದೀಲಿಪ್, ಅನುಪಮಾ ಸೇರಿದಂತೆ ಶಿವಲಿಂಗ ಚಿತ್ರ ತಂಡ ಲಂಡನ್‍ಗೆ ತೆರಳಿತು,
ಲಂಡನ್‍ನಲ್ಲಿರುವ ಬಸವಣ್ಣನ ಪುತ್ಥಳಿ ಮುಂದೆ ಶಿವಣ್ಣನಿಗೆ ಸನ್ಮಾನ ಕಾರ್ಯಕ್ರಮವನ್ನ ಏರ್ಪಡಿಸಲಾಗಿದೆ. ಲಂಡನ್ ಪಾರ್ಲಿಮೆಂಟ್ ಮುಂಭಾಗ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ಬಸವಣ್ಣನ ಪುತ್ಥಳಿ ಮುಂದೆ ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ ಅಂತಾ ಶಿವರಾಜ್‍ಕುಮಾರ್ ಲಂಡನ್‍ಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.