ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ರಾಜ್ಯ ಮಹಿಳಾ ಆಯೋಗ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಬುಧವಾರ ಮುಕ್ತಾಯಗೊಳಿಸಲಾಗಿದೆ. ದರ್ಶನ್ ದಂಪತಿ ಬುಧವಾರ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಇನ್ನು ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ದರ್ಶನ್ ಗೂ ಮುನ್ನ ವಿಚಾರಣೆಗೆ ಬಂದಿದ್ದ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಕುಟುಂಬದಲ್ಲಿ ಮತ್ತೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇವೆ. ಹೀಗಾಗಿ ಪ್ರಕರಣ ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದರು. ಈ ಹೇಳಿಕೆಗಳನ್ನು ಅನುಮೋದಿಸಿದ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು, ತಾವು ಸ್ವಯಂ ಪ್ರೇರೇಪಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.
ಕಾವೇರಿ ಭವನದಲ್ಲಿರುವ ಆಯೋಗದ ಕಚೇರಿಗೆ ಪ್ರತ್ಯೇಕವಾಗಿ ದರ್ಶನ್ ಹಾಗೂ ಅವರ ಪತ್ನಿ ವಿಚಾರಣೆ ಹಾಜರಾಗಿದ್ದರು. ಬುಧವಾರ ಬೆಳಗ್ಗೆ 10.30 ಗಂಟೆಗೆ ಆಯೋಗಕ್ಕೆ ಬಂದ ವಿಜಯಲಕ್ಷ್ಮೀ ಅವರು, ಅಧ್ಯಕ್ಷರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದರು. ಸಂಜೆ ಹೊತ್ತಿಗೆ ದರ್ಶನ್ ಸಹ ಆಗಮಿಸಿ ತಮ್ಮ ಹೇಳಿಕೆ ನೀಡಿ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.
ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಅವರಿಗೆ ವಿಜಯಲಕ್ಷ್ಮಿ ಘಟನೆ ಕುರಿತು ಸುಮಾರು ಒಂದು ಗಂಟೆ ಹೇಳಿಕೆ ಸಲ್ಲಿಸಿದರು. ಮುಂದೆ ಹೀಗೆ ಆಗದ ರೀತಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಜೊತೆಗೆ ಮತ್ತೆ ಏನಾದರು ಸಮಸ್ಯೆ ತಲೆದೋರಿದರೆ ಆಯೋಗದ ಗಮನಕ್ಕೆ ತರುವುದಾಗಿ ವಿಜಯ ಲಕ್ಷ್ಮಿ ಹೇಳಿಕೆ ನೀಡಿದ್ದಾರೆ. ಇನ್ನು ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ನಟ ದರ್ಶನ್ ಗೆ ಎಚ್ಚರಿಕೆ ನೀಡಿದ್ದಾರೆ.