ಚಿತ್ರ, ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿರುವ ಪದವಿ ವಿದ್ಯಾರ್ಥಿಗಳ 1,3 ಮತ್ತು 5 ನೇ ಸೆಮಿಸ್ಟಾರ್ ಫಲಿತಾಂಶವು ಸಂಪೂರ್ಣ ಅಸ್ತವ್ಯಸ್ಥವಾಗಿದ್ದನ್ನು ಪ್ರತಿಭಟಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಭಂಡಾರ್ಕಾರ್ಸ್ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ತರಗತಿ ಬಹಿಷ್ಕರಿಸಿ ಬೀದಿಗಿಳಿದ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ಕುಂದಾಪುರ ಮಿನಿವಿಧಾನಸೌಧದ ತನಕವೂ ಸಾಗಿದರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಭಂಡಾರ್‌ಕಾರ್ಸ್ ಕಾಲೇಜು ಎ.ಬಿ.ವಿ.ಪಿ. ಮುಖಂಡ ರಕ್ಷಿತ್ ಶೆಟ್ಟಿ, ಫಲಿತಾಂಶ ಪ್ರಕಟವಾದ ಬಳಿಕ ಕೆಲವರದ್ದು ಪರೀಕ್ಷೆಗೆ ಗೈರು ಎಂಬುದಾಗಿ ಬಂದರೇ ನಂತರದಲ್ಲಿ ಹಾಜರಾತಿ ಕಡಿಮೆ ಎಂಬುದಗಿ ಬಂದಿದೆ. ಮರುಮೌಲ್ಯಮಾಪನಕ್ಕೆ ಹಾಕಬೇಕಾದರೇ ಪೇಪರ್ ಶೀಟ್ ಇಲ್ಲ ಎನ್ನಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಅನ್ಯಾಯವಾಗಿದ್ದು ಯುನಿವರ್ಸಿಟಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಪರೀಕ್ಷೆಗೆ ಹಾಜಾರಾದವರಿಗೆ ಹಾಜಾರಾಗಿಲ್ಲವೆಂದು, ಹಾಜಾರಾಗದ ವಿದ್ಯಾರ್ಥಿಗಳು ಉತ್ತೀರ್ಣ ಎಂದು ಬಂದಿದೆ. ಎರಡನೇ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶವೂ ಬಂದಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗದ ಪಕ್ಷದಲ್ಲಿ ಇದೇ ತಿಂಗಳ 28 ರಂದು ಯುನಿವರ್ಸಿಟಿ ಎದುರು ವಿದ್ಯಾರ್ಥಿಗಳೆಲ್ಲರೂ ಒಗ್ಗೂಡಿ ದೊಡ್ಡಮಟ್ಟದ ಹೋರಾಟ ನಡೆಸುತ್ತೇವೆಂದರು.
ವಿದ್ಯಾರ್ಥಿನಿ ಜ್ಯೋತಿ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಫಲಿತಾಂಶವು 2006-2016ರ ತನಕವೂ ಸರಿಯಾಗಿಯೇ ಬರುತ್ತಿತ್ತು. ಆದರೇ ಈ ಬಾರೀ ಬರೆದಿರುವ ಎಕ್ಸಾಂಗಳಿಗೂ ಗೈರು ಎಂದು ಬರುತ್ತಿದೆ. ಖಾಸಗಿಯವರಿಗೆ ನೀಡಿದ ಕಾರಣವೇ ಈ ಎಲ್ಲಾ ಗೊಂದಲಕ್ಕೆ ಕಾರಣ ಎಂಬ ಅನುಮಾನ ನಮ್ಮದು. ಆದರೇ ನಾವು ಬರೆದ ಪರೀಕ್ಷೆಗೆ ತಕ್ಕದಾದ ನಮ್ಮ ಫಲಿತಾಂಶ ನಮಗೆ ಸರಿಯಾಗಿ ಬರಬೇಕು. ಮಂಗಳೂರು ಹೆಲ್ಪ್‌ಲೈನ್‌ಗೆ ಕರೆ ಮಾಡಿದರೇ ರಿಸಿವ್ ಕೂಡ ಮಾಡುತ್ತಿಲ್ಲ. ನಮ್ಮ ಸಮಸ್ಯೆ ಬಗೆಹರಿಯದಿದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದರು.
ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎ.ಬಿ.ವಿ.ಪಿ. ಸರ್ವ ಕಾಲೇಜು ಅಧ್ಯಕ್ಷ ರಂಜಿತ್ ಶಿರಿಯಾರ, ಕುಂದಾಪುರ ಘಟಕಾಧ್ಯಕ್ಷ ವಿನಾಯಕ ಶೆಣೈ, ತಾಲೂಕು ಸಂಚಾಲಕ ಶ್ರೀಧರ್, ತಾಲೂಕು ಸಹಕಾರ್ಯದರ್ಶಿ ಕಿಶನ್, ಬಾರ್ಕೂರು ಕಾಲೇಜು ಎ.ಬಿ.ವಿ.ಪಿ. ಘಟಕದ ಶರತ್, ಮುಖಂಡರಾದ ಪ್ರಜ್ವಲ್, ಫಿನ್ನಿ ಆಂಡ್ರಿವ್ ಎಬ್ರಾಹಂ, ಶರತ್ ಮೊದಲಾದವರಿದ್ದರು.