ಕರ್ನಾಟಕ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪಿಯು ಬೋರ್ಡ್ ಗೆ ಸಿಐಡಿ ತಂಡ ಭೇಟಿ, ತನಿಖೆ ಚುರುಕು

Pinterest LinkedIn Tumblr

exam

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ತಂಡ, ಗುರುವಾರ ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಮಂಡಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಐಡಿ ಉಪ ಪೊಲೀಸ್ ಮಹಾ ನಿರೀಕ್ಷಕಿ(ಡಿಐಜಿ) ಸೋನಿಯಾ ನಾರಂಗ ನೇತೃತ್ವದ ತಂಡ ಇಂದು ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಪಿಯು ಮಂಡಳಿಗೆ ಭೇಟಿ ನೀಡಿ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಪಲ್ಲವಿ ಆಕೃತಿ ಅವರಿಂದ ಮಾಹಿತಿ ಪಡೆದರು, ಅಲ್ಲದೆ ಸುಮಾರು 20 ನಿಮಿಷಗಳ ಕಾಲ ಪಿಯು ಮಂಡಳಿಯ ಅಧಿಕಾರಿಗಳ ವಿಚಾರಣೆ ನಡೆಸಿರುವುದಾಗಿ ಮಾಧ್ಯಮದ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ನಾರಂಗ್ ಅವರು, ಈಗಷ್ಟೇ ತನಿಖೆ ಆರಂಭಿಸಿದ್ದೇವೆ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕೋಲಾರ ಜಿಲ್ಲೆಯ ೧೪ ಕಾಲೇಜು ಮತ್ತು ಟ್ಯುಟೋರಿಯಲ್‌ಗಳ ಮೇಲೆ ದಾಳಿ ನಡೆಸಿರುವ ಸಿಐಡಿ, ಅವುಗಳ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಯಾವ ಲೋಪದೋಷಗಳಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ತರಬೇತುದಾರರ ಮೇಲೆ ಕಣ್ಣಿಟ್ಟಿದ್ದಾರೆ.

ಕಳೆದ ಸೋಮವಾರ ನಡೆದ ರಸಾಯನಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪರೀಕ್ಷೆ ಆರಂಭವಾಗುವ ಮುನ್ನವೇ ಸೋರಿಕೆಯಾಗಿತ್ತು. ಕೈ ಬರಹದಲ್ಲಿದ್ದ ಪ್ರಶ್ನೆಗಳು, ಕೆಲ ನಿಮಿಷದಲ್ಲಿ ವ್ಯಾಟ್ಸ್‌ ಆ್ಯಪ್‌ ಮೂಲಕ ನೂರಾರು ವಿದ್ಯಾರ್ಥಿಗಳ ಕೈ ಸೇರಿದ್ದವು. ಈ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಯೊಬ್ಬ, ಪಿಯು ಇಲಾಖೆಯ ನಿರ್ದೇಶಕಿ ಪಲ್ಲವಿ ಆಕೃತಿ ಅವರಿಗೆ ಖುದ್ದು ತಲುಪಿಸಿದ್ದ.

ಕೂಡಲೇ ನಿರ್ದೇಶಕರು, ಹತ್ತಿರದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಬಯಲಾಗಿದ್ದ ಕೈ ಬರಹದ ಪ್ರಶ್ನೆ ಪತ್ರಿಕೆ ಹಾಗೂ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಪತ್ರಿಕೆಗಳ ಪ್ರಶ್ನಾವಳಿಗಳನ್ನು ತಾಳೆ ಹಾಕಿದಾಗ ಭಾಗಶಃ ಹೊಂದಾಣಿಕೆಯಾಗಿತ್ತು.

Write A Comment