ಜಾಗ ಎಲ್ಲಾರೂ ಸಿಗಬಹುದಾ ಅಂತ ನೋಡಿದರು ನಾಯಕ ಕಾರ್ತಿಕ್. ಆದರೆ, ಸಿಗಲೇ ಇಲ್ಲ. ಅಲ್ಲೆಲ್ಲೋ ಜನರ ಮಧ್ಯೆ ನಿಂತಿದ್ದರು. ಈ ಕಡೆ ಮೆಟ್ಟಿಲುಗಳ ಮೇಲೆ ಕುಳಿತಿದ್ದರು. ಒಂದಿಷ್ಟು ಹೊತ್ತು ವೇದಿಕೆಯ ಮೇಲಾಯಿತು. ಕಾರ್ಯಕ್ರಮ ಮುಗಿಯುವವರೆಗೂ ಕಾರ್ತಿಕ್ ಪರದಾಡುತ್ತಲೇ ಇದ್ದರು. ಅವರೊಬ್ಬರೇ ಅಲ್ಲ, ಚಿತ್ರತಂಡದವರೆಲ್ಲಾ ನಿಂತೇ ಇದ್ದರು. ಹೇಗೆ ಹಿರಿಯರಾದ ಭಗವಾನ್ ಅವರಿಗೆ ಒಂದು ಸೀಟು ಮಾಡಿ ಕೂಡಿಸಿದ್ದಾಯಿತು. ಒಂದು ಪಕ್ಷ ಇನ್ನಷ್ಟು ಅತಿಥಿಗಳು ಬಂದಿದ್ದರು, ಕಷ್ಟ ಇತ್ತು. ಆ ಮಟ್ಟಿಗೆ ಸಿನಿಪೊಲೀಸ್ ಚಿತ್ರಮಂದಿರ ತುಂಬಿತ್ತು.
ಅದು “ಕೋಮ’ ಎನ್ನುವ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಬಹುಶಃ ಭಗವಾನ್ ಮತ್ತು ನಟ ಗುರುಪ್ರಸಾದ್ ಬಿಟ್ಟರೆ, ಮಿಕ್ಕಂತೆ ಚಿತ್ರತಂಡದವರೆಲ್ಲಾ ಹೊಸಬರೇ. ನಿರ್ದೇಶಕರಾದ ರವಿ ಮತ್ತು ಚೇತನ್, ನಿರ್ಮಾಪಕರಾದ ರಾಜಾ ಸೆಲ್ವಂ, ಸಂಗೀತ ನಿರ್ದೇಶಕ ಆಶಿಕ್ ಅರುಣ್, ನಾಯಕ ಕಾರ್ತಿಕ್, ನಾಯಕಿ ಶ್ರುತಿ ಎಲ್ಲರೂ ಹೊಸಬರೇ. ಈ ಹೊಸಬರೆಲ್ಲಾ ಸೇರಿ ಭಯಂಕರ ಉತ್ಸಾಹದಿಂದ, ಹಾಡುಗಳ ಬಿಡುಗಡೆ ಸಮಾರಂಭವನ್ನು ದೊಡ್ಡದಾಗಿಯೇ ಆಯೋಜಿಸಿದ್ದರು. ಗುರು ಬರಲಿಲ್ಲ. ಬಂದ ಪ್ರಿಯಾಂಕಾ ಉಪೇಂದ್ರ ಹೆಚ್ಚು ಹೊತ್ತು ನಿಲ್ಲಲಿಲ್ಲ. ಭಗವಾನ್ ಅವರಿಂದ ಹಾಡುಗಳನ್ನು ಬಿಡುಗಡೆ ಮಾಡಿಸಲಾಯಿತು.
ಅದಕ್ಕೂ ಮುನ್ನ ನಿರ್ದೇಶಕರನ್ನು ವೇದಿಕೆ ಮೇಲೆ ಕರೆಸಲಾಯಿತು. ಏನ್ ಸ್ವಾಮಿ “ಕೋಮ’ ಅಂದರೆ ಎಂದು ನಿರೂಪಕರು ಕೇಳಿದ್ದೂ ಆಯಿತು. ಇಬ್ಬರೂ ನಿರ್ದೇಶಕರು ಚೂರು ಚೂರು ವಿವರಗಳನ್ನು ನೀಡಿದರು. ಪ್ರತಿಯೊಬ್ಬರ ಜೀವನದಲ್ಲೂ ಕೋಮ ಮೂಮೆಂಟ್ ಅಂತ ಇರುತ್ತದಂತೆ. ಅಂದರೆ, ತುಂಬಾ ಖುಷಿಯಾದಾಗ ಅಥವಾ ಶಾಕ್ ಆದಾಗ, ಮನುಷ್ಯನ ಮೈಂಡ್ ಒಂದು ಕ್ಷಣ ನಿಲ್ಲುತದಂತೆ. ಆ ಕ್ಷಣಕ್ಕೆ ಕೋಮ ಮೂಮೆಂಟ್ ಎನ್ನುತ್ತಾರಂತೆ. ಅಂಥದ್ದೇ ಒಂದು ಕ್ಷಣ ಸಿನಿಮಾದಲ್ಲೂ ಇದೆಯಂತೆ. ಹಾಗಾಗಿ ಆ ಹೆಸರು ಇಡಬೇಕಾಯಿತು ಎಂಬ ಉತ್ತರ ಇಬ್ಬರಿಂದ ಬಂತು. ರವಿ ಮತ್ತು ಚೇತನ್ ಇಬ್ಬರೂ ಸುಮಾರು ಆರು ವರ್ಷಗಳಿಂದ ಪರಿಚಿತರು. ಒಟ್ಟಿಗೇ ಜಾಹೀರಾತುಗಳು, ಕಿರುಚಿತ್ರಗಳನ್ನು ಮಾಡಿದ್ದರಂತೆ. ಈಗ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಇಬ್ಬರ ನಡುವೆ ಕಿತ್ತಾಟವಾಗಲಿಲ್ಲವಾ ಎಂಬ ಪ್ರಶ್ನೆಯೂ ಬಂತು. ಹಾಗೇನಿಲ್ಲವಂತೆ. ಇಬ್ಬರ ಮಧ್ಯೆ ಕೆಮಿಸ್ಟ್ರಿ ಚೆನ್ನಾಗಿದ್ದುದರಿಂದ ಪ್ರತಿ ಶಾಟ್ ಮತ್ತು ಪ್ರತಿ ದೃಶ್ಯವನ್ನೂ ಇಬ್ಬರೂ ಕೂತು ಚರ್ಚೆ ಮಾಡಿ ತೆಗೆಯುತ್ತಿದ್ದರಂತೆ. ಹಾಗಾಗಿ ಏನೂ ಸಮಸ್ಯೆಯಾಗಲಿಲ್ಲ ಎಂದರು ಇಬ್ಬರು. ಭಗವಾನ್‌ರಂಥ ಹಿರಿಯ ನಿರ್ದೇಶಕರನ್ನು ನಿರ್ದೇಶಿಸುವಾಗ ಭಯಂಕರ ಟೆನ್ಶನ್ ಆಗಿತ್ತಂತೆ. ಆದರೆ, ಅವರ ಒಳ್ಳೆಯ ಮಾತುಗಳಿಂದ ಕೆಲಸ ಸುಸೂತ್ರವಾಯಿತಂತೆ. ನಂತರ ಭಗವಾನ್ ಮಾತಾಡಿದರು. “ಡಾ. ರಾಜ್ ಅವರ ಜೊತೆಗೆ ಕೆಲಸ ಮಾಡಿದವರು ನಾವು. ಅವರು ನಿರ್ದೇಶಕರ ನಟ. ನಿರ್ದೇಶಕರಿಗೆ ವಿಧೇಯನಾಗಿರಬೇಕು ಎಂದು ಅರಿತಿದ್ದವರು. ನಾನು ಸಹ ಅದೇ ದಾರಿಯಲ್ಲಿ ನಡೆದೆ. ಇಲ್ಲಿ ನಿರ್ದೇಶಕರು ಏನು ಹೇಳಿದರೋ, ಅದನ್ನ ಫಾಲೋ ಮಾಡಿದ್ದೀನಿ ಅಷ್ಟೇ. ಆಗಾಗ ಕೆಲವು ಸಲಹೆ ಕೊಟ್ಟಿದ್ದೂ ಉಂಟು. ಅದನ್ನು ಅವರು ಕೋಪ ಮಾಡಿಕೊಳ್ಳದೆ ಅಳವಡಿಸಿಕೊಂಡಿದ್ದಾರೆ’ ಎಂದರು. ಅವರ ಜೊತೆಗಿದ್ದ ಚಿತ್ರತಂಡದವರೆಲ್ಲಾ ಚಿತ್ರದಲ್ಲಿರುವುದರಕ್ಕೆ ಮತ್ತು ಭಗವಾನ್ ಅವರಂತಹ ಹಿರಿಯರ ಜೊತೆಗೆ ಕೆಲಸ ಮಾಡಿದ್ದಕ್ಕೆ ಖುಷಿಪಟ್ಟರು. ಮಧ್ಯೆ ಮಧ್ಯೆ ಹಾಡುಗಳ ಪ್ರದರ್ಶನ್, ಲೈವ್ ಆರ್ಕೆಸ್ಟ್ರಾ ಎಲ್ಲವೂ ಇತ್ತು. ಎಲ್ಲಾ ಮುಗಿಯುವ ಹೊತ್ತಿಗಾದರೂ ಕಾರ್ತಿಕ್‌ಗೆ ಸೀಟು ಸಿಕ್ಕಿತಾ ಎಂಬುದು ಮಾತ್ರ ಗೊತ್ತಾಗಲಿಲ್ಲ.
-ಚೇತನ್ ನಾಡಿಗೇರ್
-ಉದಯವಾಣಿ