ಭಾರತದ ಜೊತೆ ದ್ವಿಪಕ್ಷೀಯ ಮಾತುಕತೆ ಪುನರಾರಂಭ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಹೇಳಿಕೆ ನೀಡಿದ್ದಾರೆ. ಅ ಮೂಲಕ ಭಾರತದ ಜತೆಗಿನ ಮಾತುಕತೆ ಪ್ರಕ್ರಿಯೆಗೆ ಪಾಕಿಸ್ತಾನ ಬಾಗಿಲು ಮುಚ್ಚಿದಂತಾಗಿದೆ. ದ್ವಿಪಕ್ಷೀಯ ಮಾತುಕತೆಯ ಸ್ಥಿತಿಯೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಾಸಿತ್, ‘ಸದ್ಯದ ಮಟ್ಟಿಗೆ ಅದು ಅಮಾನತುಗೊಂಡಿದೆ’ ಎಂದು ಹೇಳಿದ್ದಾರೆ. ಸಮಗ್ರ ದ್ವಿಪಕ್ಷೀಯ ಮಾತುಕತೆಯ ವಿಧಾನಗಳು ಮತ್ತು ವೇಳಾಪಟ್ಟಿಯನ್ನು ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಭೇಟಿಯಾಗಿ ಅಂತಿಮಗೊಳಿಸಬೇಕಿತ್ತು ಆದರೆ ಭಾರತ ಮತ್ತು ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯೂ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ ಎಂದೂ ಬಾಸಿತ್ ತಿಳಿಸಿದ್ದಾರೆ.
ಎಲ್ಲಾ ದ್ವಿಪಕ್ಷೀಯ ವಿವಾದಗಳನ್ನು ಬಗೆಹರಿಸಲು ಭಾರತದ ಜತೆ ತಡೆ ರಹಿತ, ಸಮಗ್ರ ಮತ್ತು ಅರ್ಥಪೂರ್ಣ ಮಾತುಕತೆಗೆ ಪಾಕಿಸ್ತಾನ ಸದಾ ಸಿದ್ಧವಾಗಿದೆ ಎಂದಿದ್ದಾರೆ. ಆದರೆ ಭಾರತ ಅದಕ್ಕೆ ಸಿದ್ಧವಿಲ್ಲ. ಮಾತುಕತೆ ಮತ್ತೆ ಆರಂಭಿಸಲು ಭಾರತ ಸಿದ್ಧವಾಗುವ ತನಕ ಕಾಯಲು ಪಾಕಿಸ್ತಾನ ಸಿದ್ಧವಿದೆ ಎಂದೂ ಬಾಸಿತ್ ತಿಳಿಸಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಳೆದ ಡಿಸೆಂಬರ್ 9ರಂದು ಇಸ್ಲಾಮಾಬಾದ್‌ನಲ್ಲಿ ಅಲ್ಲಿನ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ಪುನರಾರಂಭವನ್ನು ಘೋಷಿಸಿದ್ದರು.