ಡಮಾಸ್ಕಸ್: ಸಿರಿಯಾದಲ್ಲಿ ಇಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇದೀಗ ಉಗ್ರರು ಸಿಮೆಂಟ್ ಕಾರ್ಖಾನೆಯ ಸುಮಾರು 300 ಹೆಚ್ಚು ಕಾರ್ಮಿಕರನ್ನು ಅಪಹರಿಸಿದೆ ಎಂದು ತಿಳಿದುಬಂದಿದೆ.
ವಿಶ್ವ ಸಮುದಾಯದ ಬೆಂಬಲದೊಂದಿಗೆ ಇಸಿಸ್ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಿರಿಯಾ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಇಸಿಸ್ ಉಗ್ರಗಾಮಿ ಸಂಘಟನೆ ಈ ಕೃತ್ಯವೆಸಗಿದೆ ಎಂದು ಹೇಳಲಾಗುತ್ತಿದೆ. ಗುರುವಾರ ಸಿರಿಯಾದ ದುಮ್ಯಾರ್ ಪಟ್ಟಣದಲ್ಲಿರುವ ಅಲ್ ಬಾಡಿಯಾ ಸಿಮೆಂಟ್ ಕಾರ್ಖಾನೆಯ ಮೇಲೆ ದಾಳಿ ಮಾಡಿದ ಇಸಿಸ್ ಉಗ್ರರು ಅಲ್ಲಿದ್ದ ಸುಮಾರು 300ಕ್ಕೂ ಅಧಿಕ ಕಾರ್ಮಿಕರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.
ದುಮ್ಯಾರ್ ಪಟ್ಟಣ ಸಿರಿಯಾದ ರಾಜಧಾನಿಯಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿದ್ದು, ಅಲ್ಲಿಂದ ಕಾರ್ಮಿಕರನ್ನು ಅಪಹರಿಸುವ ಮೂಲಕ ಇಸಿಸ್ ಸಿರಿಯಾ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ರವಾನಿಸಿದೆ. ಅಲ್ಲದೆ ಅಪಹರಣಕ್ಕೊಳಗಾದವರ ಪೈಕಿ 10 ಮಂದಿಯನ್ನು ಕೊಲ್ಲಲಾಗಿದೆ ಎಂಬ ವಿಚಾರ ಕೂಡ ಇದೀಗ ತಿಳಿದುಬಂದಿದೆ. ಇನ್ನು ಅಪಹರಣಕ್ಕೊಳಗಾದ ಕಾರ್ಮಿಕರ ರಕ್ಷಣೆಗೆ ಸಿರಿಯಾ ಸರ್ಕಾರ ಮುಂದಾಗಿದ್ದು, ಸೈನಿಕ ಕಾರ್ಯಾಚರಣೆ ಅಥವಾ ಸಂಧಾನದ ಮೂಲಕ ಕಾರ್ಮಿಕರನ್ನು ಬಿಡಿಸುವ ಕುರಿತು ಚಿಂತನೆಯಲ್ಲಿ ತೊಡಗಿದೆ.
ಅಂತರಾಷ್ಟ್ರೀಯ