ಬೆಂಗಳೂರು: ಬಿಎಸ್ ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದೇ ತಡ. ಅವರ ಬೆಂಗಲಿಗರಲ್ಲಿ, ಕಾರ್ಯಕರ್ತರಲ್ಲಿ ಹೊಸ ಸಂಚಲನ ಶುರುವಾಗಿದೆ. ದಿಲ್ಲಿಯಿಂದ ಬಂದ ಬಿಎಸ್ವೈ ಅವರನ್ನ ಸಾವಿರಾರು ಮಂದಿ ಏರ್ಪೋರ್ಟ್ಗೆ ಹೋಗಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ರು. ಇದೇ ವೇಳೆ ಮಾತಾಡಿದ ಪಕ್ಷದ ಮುಖಂಡರು ಯಡಿಯೂರಪ್ಪನವರೇ ನಮ್ಮ ಮುಂದಿನ ಸಿಎಂ ಅಂತಾ ಘೋಷಿಸಿದ್ರು.
ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ಸಂಭ್ರಮ ಮನೆ ಮಾಡಿತ್ತು. ಕಾರ್ಯಕರ್ತರು ಬಿಎಸ್ವೈಗೆ ಆರತಿ ಬೆಳಗಿ ಪಕ್ಷದ ಕಚೇರಿಯೊಳಗೆ ಬರಮಾಡಿಕೊಂಡರು. ಕೇಂದ್ರ ಸಚಿವರಾದ ಅನಂತಕುಮಾರ್, ಡಿವಿ ಸದಾನಂದಗೌಡ, ಆರ್.ಅಶೋಕ್, ವಿ ಸೋಮಣ್ಣ, ಶೋಭಾ ಕರಂದ್ಲಾಜೆ, ಎಂಎಲ್ಸಿಗಳು, ಕಾರ್ಪೊರೇಟರ್ಗಳು ಸೇರಿ ಹಲವು ನಾಯಕರು ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಇದೇ ವೇಳೆ ಮಾತಾಡಿದ ಅನಂತಕುಮಾರ್, ಇಂದು ಬಿಜೆಪಿಗೆ ಯುಗಾದಿಯಲ್ಲ, ದೀಪಾವಳಿ. ಬಿಎಸ್ವೈ ನಾಲ್ಕನೇ ಬಾರಿ ಅಧ್ಯಕ್ಷರಾಗಿ ಬೌಂಡರಿ ಹೊಡೆದಿದ್ದಾರೆ. 2018 ರಲ್ಲಿ ಬಿಎಸ್ವೈ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದರು. ಇದಕ್ಕೆ ದನಿಗೂಡಿಸಿದ ಸದಾನಂದಗೌಡ ಸಹ, ಬಿಎಸ್ವೈ ಸಿಎಂ ಆಗ್ತಾರೆ, ಕಾಂಗ್ರೆಸ್ಸನ್ನು ಧೂಳೀಪಟ ಮಾಡ್ತಾರೆ ಎಂದು ಹೇಳಿದರು.
ಬಿಜೆಪಿ ಮುಖಂಡರಿಗೆ, ಕಾರ್ಯಕರ್ತರಿಗೆ ಬಿಎಸ್ವೈ ಅಭಿನಂದನೆ ಸಲ್ಲಿಸಿದರು. ಅಮಿತ್ ಶಾ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಬೇಕು. ನಾವು ಒಟ್ಟಾಗಿದ್ದೇವೆ, ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಇದೇ ವೇಳೆ ತಮ್ಮ ಮೇಲಿನ ಕೇಸ್ಗಳ ಬಗ್ಗೆ ಬಿಎಸ್ವೈ ಮಾತಾಡಿದರು. ನನಗೆ ನ್ಯಾಯಾಂಗದ ವ್ಯವಸ್ಥೆ ಮೇಲೆ ವಿಶ್ವಾಸವಿದೆ. ಇನ್ನೆರಡು ಪ್ರಕರಣಗಳಿವೆ, ಅವೆಲ್ಲಾ ಪರಿಹಾರ ಆಗುತ್ತವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.