ಮುಂಬೈ: ನೂತನ ಡ್ಯಾನ್ಸ್ ಬಾರ್ ಮಸೂದೆಗೆ ಮಹಾರಾಷ್ಟ್ರ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದ್ದು, ಅದನ್ನು ನಾಳೆ ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ನೂತನ ಕಾಯ್ದೆಯಲ್ಲಿ ಬಾರ್ ಡ್ಯಾನ್ಸರ್ ಗಳ ಸುರಕ್ಷತೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿತ್ತು. ಅವರನ್ನು ಮುಟ್ಟುವ ಹಾಗೂ ಅವರ ಮೇಲೆ ಹಣ ಚೆಲ್ಲುವ ವ್ಯಕ್ತಿಗಳಿಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರುಪಾಯಿ ದಂಡ ವಿಧಿಸಲು ಅವಕಾಶ ನೀಡಲಾಗಿದೆ.
ಇನ್ನು ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುವವರ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗಿರುವ ಮಹಾ ಸರ್ಕಾರ, ಅವರಿಗೆ 25 ಲಕ್ಷ ರುಪಾಯಿ ದಂಡ ವಿಧಿಸಲು ಅವಕಾಶ ನೀಡಲಾಗಿದೆ.
ಮಾರ್ಚ್ 29ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸೂಚಿಸಲಾಗಿತ್ತು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇತ್ತೀಚಗಷ್ಟೇ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಡ್ಯಾನ್ಸ್ ಬಾರ್ ಗಳ ನಿಷೇಧವನ್ನು ತೆರವುಗೊಳಿಸಿತ್ತು.