ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಎರಡನೇ ಬಾರಿಗೆ ಲಂಕಾ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಕಳೆದ ವರ್ಷವಷ್ಟೇ ಸನತ್ ಜಯಸೂರ್ಯ ಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಯನ್ನು ಬಿಟ್ಟುಕೊಟ್ಟಿದ್ದರು. ಇಎಸ್ ಪಿಎನ್ ಕ್ರಿಕ್ ಇನ್ಫೋ ಮಾಹಿತಿ ಪ್ರಕಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿರುವ ಥಿಲಂಗಾ ಸುಮಥಿಪಾಲ, ಲಂಕಾ ಕ್ರಿಕೆಟ್ ಆಯ್ಕೆ ಸಮಿತಿಗೆ ಸನತ್ ಜಯಸೂರ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದರ ಬಗ್ಗೆ ಸುಳಿವು ನೀಡಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗರಾದ ರೊಮೇಶ್ ಕಲುವಿತರಣ ಹಾಗೂ ರಂಜಿತ್ ಮದುರಸಿಂಘ ಸದಸ್ಯರಾಗಿರಲಿದ್ದಾರೆ ಎಂದು ಹೇಳಲಾಗಿದೆ. 2019 ರ ವಿಶ್ವಕಪ್ ವರೆಗೂ ಸನತ್ ಜಯಸೂರ್ಯ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಸನತ್ ಜಯಸೂರ್ಯ ಈ ಹಿಂದೆ 2013 ರ ಜನವರಿಯಿಂದ 2015 ರ ಮಾರ್ಚ್ ವರೆಗೂ ಲಂಕಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.