ಮುಂಬೈ: ಮುಂಬೈ ಮತ್ತು ಪುಣೆಗಳಲ್ಲಿ ನಡೆಯುವ 17 ಐಪಿಎಲ್ ಪಂದ್ಯಗಳಿಗೆ ಮೈದಾನದ ಪಿಚ್ ನಿರ್ವಹಣೆಗೆ ಶುದ್ಧೀಕರಿಸಿದ ಚರಂಡಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ಬಿಸಿಸಿಐ ಮುಂಬೈ ಹೈಕೋರ್ಟ್ ಗೆ ತಿಳಿಸಿದೆ.
ಅಲ್ಲದೆ ಕಿಂಗ್ಸ್ 11 ಪಂಜಾಬ್ ತಂಡ ಅದರ ಎಲ್ಲಾ ಮೂರು ಪಂದ್ಯಗಳನ್ನು ನಾಗ್ಪುರದಿಂದ ಬೇರೆ ಕಡೆ ಆಡಲು ತೀರ್ಮಾನಿಸಿದೆ. 9 ಪಂದ್ಯಗಳನ್ನು ಪುಣೆ ಹಾಗೂ 8 ಪಂದ್ಯಗಳನ್ನು ಮುಂಬೈಯಲ್ಲಿ ಆಡಲಾಗುವುದು ಎಂದು ಸಹ ಕ್ರಿಕೆಟ್ ಮಂಡಳಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ವಿ.ಎಂ,ಕಾನಡೆ ಮತ್ತು ಎಂ.ಎಸ್.ಕಾರ್ನಿಕ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಮಾಹಿತಿ ನೀಡಿದ ಹಿರಿಯ ವಕೀಲ ರಫೀಕ್ ದಾದಾ, ಶುದ್ಧೀಕರಿಸಿದ ಚರಂಡಿ ನೀರನ್ನು ಒದಗಿಸುವಂತೆ ರಾಯಲ್ ವೆಸ್ಟರ್ನ್ ಇಂಡಿಯಾ ಟರ್ಫ್ ಕ್ಲಬ್ ಗೆ ಮನವಿ ಮಾಡಿಕೊಂಡಿದ್ದೇವೆ. ಅವರು ಪ್ರತಿದಿನ 7-8 ಟ್ಯಾಂಕರ್ ಶುದ್ಧೀಕರಿಸಿದ ಚರಂಡಿ ನೀರನ್ನು ಒದಗಿಸುತ್ತಾರೆ. ನಾವು ಪಿಚ್ ಗೆ ಟ್ಯಾಂಕರ್ ನೀರು ಬಳಸುವುದಿಲ್ಲ ಎಂದು ನ್ಯಾಯಾಲಯದ ಮುಂದೆ ಇಂದು ಹೇಳಿದರು.
ಸರ್ಕಾರದ ಅಫಿದವಿತ್ತು ಸಿದ್ದವಾಗದ ಕಾರಣ ನ್ಯಾಯಪೀಠ ವಿಚಾರಣೆಯನ್ನು ಅಪರಾಹ್ನಕ್ಕೆ ಮುಂದೂಡಿದೆ.ಮಹಾರಾಷ್ಟ್ರದಲ್ಲಿ ಜನರು ತೀವ್ರ ಬರಗಾಲ ಎದುರಿಸುತ್ತಿರುವಾಗ ಐಪಿಎಲ್ ಆಟಕ್ಕಾಗಿ ಕ್ರಿಕೆಟ್ ಪಿಚ್ ಗಳ ನಿರ್ವಹಣೆಗೆಂದು ಪ್ರತಿದಿನ ಲಕ್ಷಾಂತರ ಲೀಟರ್ ನೀರನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಪ್ರಜಾಸತ್ತೆ ಸುಧಾರಣೆಗೆ ಲೋಕಸತ್ತ ಮೂವ್ ಮೆಂಟ್ ಮತ್ತು ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು.
ಕ್ರಿಕೆಟ್ ಪಿಚ್ ಗಾಗಿ ಲಕ್ಷಾಂತರ ಲೀಟರ್ ನೀರು ಪೋಲು ಮಾಡುವ ಬಗ್ಗೆ ಮುಂಬೈ ಹೈಕೋರ್ಟ್ ಈ ಹಿಂದೆ ಬಿಸಿಸಿಐಗೆ ಛೀಮಾರಿ ಹಾಕಿತ್ತು. ಪಿಚ್ ಗೆ ಬಳಸುತ್ತಿರುವ ನೀರು ಕುಡಿಯುವ ನೀರು ಹೌದೇ, ಅಲ್ಲವೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೂ ಆದೇಶ ನೀಡಿತ್ತು. ಅಲ್ಲದೆ ನೀರಿನ ಕೊರತೆ ನಿವಾರಿಸಲು ತಕ್ಷಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆಯೂ ಸರ್ಕಾರವನ್ನು ಪ್ರಶ್ನಿಸಿತ್ತು.
ಅದಕ್ಕೆ ಉತ್ತರಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕುಡಿಯುವ ನೀರನ್ನು ಐಪಿಎಲ್ ಪಂದ್ಯಗಳಿಗೆ ಒದಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.