ಪುತ್ತೂರು, ಏ.12: ಪುತ್ತೂರಿನ ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣದ ಆರೋಪಿ ಅಬ್ದುಲ್ ಆಸಿರ್(21)ಗೆ ಮತ್ತೆ ಎರಡು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಏ.1ರಂದು ಬಂಧಿತನಾದ ಈತನನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭ ಪೊಲೀಸ್ ಕಸ್ಟಡಿ ವಿಸ್ತರಿಸಿ ಆದೇಶ ನೀಡಿದ ನ್ಯಾಯಾಧೀಶರು ಏ.13ರಂದು ಹಾಜರುಪಡಿಸುವಂತೆ ಸೂಚಿಸಿದರು.
ಏ.1ರಂದು ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದ್ದ ಆಸೀರ್ ನನ್ನು 4ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 7 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿತ್ತು.
ಇದೀಗ ಪೊಲೀಸರ ಮನವಿಯಂತೆ ಎರಡು ದಿನ ವಿಸ್ತರಣೆಯಾಗಿದೆ. ನಾಡ ಪಿಸ್ತೂಲ್ ಇಟ್ಟುಕೊಂಡು ತಿರುಗಾಡುತ್ತಿದ್ದ ಸಂದರ್ಭ ಬಂಧಿತನಾಗಿದ್ದ ಆಸೀರ್ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಪ್ರಕಾರ ಪ್ರಕರಣ ದಾಖಲಾಗಿತ್ತು. ವಿಚಾರಣೆ ಸಂದರ್ಭ ಈತ ಅಕ್ಟೋಬರ್ 6ರಂದು ಪುತ್ತೂರಿನಲ್ಲಿ ರಾಜಧಾನಿ ಜುವೆಲ್ಲರ್ಸ್ ಮೇಲೆ ನಡೆದ ಶೂಟೌಟ್ ಪ್ರಕರಣದಲ್ಲೂ ಆರೋಪಿ ಎಂಬುದು ಬೆಳಕಿಗೆ ಬಂದಿದೆ.