ಮೊಹಾಲಿ: ಸ್ಥಳೀಯ ಆಟಗಾರ ಮನನ್ ವೊಹ್ರಾ ಮತ್ತು ಚೆನ್ನೈನ ಮುರಳಿ ವಿಜಯ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಟೂರ್ನಿಯಲ್ಲಿ ಮೊದಲ ಜಯದ ಸಂಭ್ರಮ ಆಚರಿಸಿತು.
ಪಿಸಿಎ ಕ್ರೀಡಾಂಗಣದಲ್ಲಿ ಭಾನು ವಾರ ಸಂಜೆ ನಡೆದ ಪಂದ್ಯದಲ್ಲಿ ಆತಿ ಥೇಯ ತಂಡ 6 ವಿಕೆಟ್‌ಗಳಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಮಹೇಂದ್ರಸಿಂಗ್ ದೋನಿ ನಾಯಕತ್ವದ ಪುಣೆ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 152 ರನ್ ಗಳಿಸಿತ್ತು.
ಇದಕ್ಕುತ್ತರವಾಗಿ ಆರಂಭಿಕ ಜೋಡಿ ಮನನ್ ವೊಹ್ರಾ (51; 33ಎ, 7ಬೌಂ) ಮತ್ತು ಮುರಳಿ ವಿಜಯ್ (53; 49ಎ, 5ಬೌಂ, 2ಸಿ) ಅವರ ಆಟದ ನೆರವಿನಿಂದ ಪಂಜಾಬ್ ತಂಡವು ಇನಿಂಗ್ಸ್‌ನಲ್ಲಿ ಇನ್ನೂ ಎಂಟು ಎಸೆತಗಳು ಬಾಕಿಯಿರುವಾಗಲೇ ಜಯಿಸಿತು. ಪಂಜಾಬ್ ತಂಡವು ಕಳೆದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಪುಣೆ ತಂಡವು ತನ್ನ ಮೊದಲ ಪಂದ್ಯದಲ್ಲ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿತ್ತು. ಎರಡನೇ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಎದುರು ಸೋತಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪುಣೆ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಸಂದೀಪ್ ಶರ್ಮಾ ಮಿಂಚಿನ ದಾಳಿಗೆ ಅಜಿಂಕ್ಯ ರಹಾನೆ (9 ರನ್) ಬೌಲ್ಡ್ ಆಗಿ ನಿರ್ಗಮಿಸಿದರು. ಆದರೆ ಫಾಫ್ ಡು ಪ್ಲೆಸಿ (67; 53ಎ, 8ಬೌಂ) ದಿಟ್ಟತನದಿಂದ ಬ್ಯಾಟ್ ಬೀಸಿದರು. ಅವರು ಕೆವಿನ್ ಪೀಟರ್ಸನ್ (15 ರನ್) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 55 ರನ್ ಪೇರಿಸಿದರು. ಕೈಲ್ ಅಬಾಟ್ ಎಸೆತದಲ್ಲಿ ಪೀಟರ್ಸನ್ ಔಟಾದ ನಂತರ ಬಂದ ಪೆರೆರಾ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಆದರೆ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ (38; 26ಎ, 5ಬೌಂ) ರನ್ ಗಳಿಕೆಗೆ ವೇಗ ನೀಡಿದರು. ಸ್ಮಿತ್ ಮತ್ತು ಫಾಫ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 63 ರನ್ ಸೇರಿಸಿದರು. ಆದರೆ, ಫಾಫ್ ಮತ್ತು ಸ್ಮಿತ್ ಅವರ ವಿಕೆಟ್‌ಗಳನ್ನು ಕಬಳಿಸಿದ ಮೋಹಿತ್ ಶರ್ಮಾ ಸಂಭ್ರಮಿಸಿದರು. ಕೊನೆಯ ಹಂತದ ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಲು ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ 152 ರನ್‌ಗಳಿಗೆ ತಂಡದ ಮೊತ್ತವು ಸೀಮಿತವಾಯಿತು.
ಪಂಜಾಬ್ ತಂಡದ ಆರಂಭಿಕ ಜೋಡಿ ಮುರಳಿ ಮತ್ತು ಮನನ್ ಮೊದಲ ವಿಕೆಟ್ ಜೊತೆಯಾಟದಲ್ಲಿ 12.2 ಓವರ್‌ಗಳಲ್ಲಿ 97 ರನ್‌ಗಳನ್ನು ಪೇರಿಸಿದರು. ಅದರಲ್ಲೂ ಮನನ್ ವೊಹ್ರಾ 154.54ರ ಸ್ಟ್ರೈಕ್‌ರೇಟ್‌ನಲ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದರು. ಅವರು ಮರುಗನ್ ಅಶ್ವಿನ್ ಬೌಲಿಂಗ್ ನಲ್ಲಿ ಔಟಾದ ನಂತರ ಶಾನ್ ಮಾರ್ಷ್ ಮತ್ತು ಡೇವಿಡ್ ಮಿಲ್ಲರ್ ಹೆಚ್ಚು ಹೊತ್ತು ಆಡಲಿಲ್ಲ. ನಂತರ ಕ್ರೀಸ್‌ಗೆ ಬಂದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (32; 14ಎ, 3ಬೌಂ, 2ಸಿ) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಸ್ಕೋರ್‌ಕಾರ್ಡ್
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ 7 ಕ್ಕೆ 152
(20 ಓವರ್‌ಗಳಲ್ಲಿ)
ಅಜಿಂಕ್ಯ ರಹಾನೆ ಬಿ ಸಂದೀಪ್ ಶರ್ಮಾ 09
ಫಾಫ್ ಡು ಪ್ಲೆಸಿ ಸಿ ಮತ್ತು ಬಿ ಮೋಹಿತ್ ಶರ್ಮಾ 67
ಕೆವಿನ್ ಪೀಟರ್ಸನ್ ಸಿ ಮನನ್ ವೊಹ್ರಾ ಬಿ ಕೈಲ್ ಅಬಾಟ್ 15
ತಿಸಾರ ಪೆರೆರಾ ಸಿ ಮೋಹಿತ್ ಶರ್ಮಾ ಬಿ ಸಂದೀಪ್ ಶರ್ಮಾ 08
ಸ್ಟೀವನ್ ಸ್ಮಿತ್ ಸಿ ಡೇವಿಡ್ ಮಿಲ್ಲರ್ ಬಿ ಮೋಹಿತ್ ಶರ್ಮಾ 38
ಮಹೇಂದ್ರಸಿಂಗ್ ದೋನಿ ಸಿ ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಮೋಹಿತ್ ಶರ್ಮಾ 01
ಇರ್ಫಾನ್ ಪಠಾಣ್ ರನ್‌ಔಟ್ (ಮ್ಯಾಕ್ಸ್‌ವೆಲ್/ಸಹಾ) 02
ಆರ್. ಅಶ್ವಿನ್ ಔಟಾಗದೆ 01
ಇತರೆ: (ಲೆಗ್‌ಬೈ 8, ವೈಡ್ 3) 11
ವಿಕೆಟ್ ಪತನ: 1–10 (ರಹಾನೆ; 2.1), 2–65 (ಪೀಟರ್ಸನ್ ; 7.6), 3–76 (ಪೆರೆರಾ; 10.1), 4–139 (ಸ್ಮಿತ್; 17.5), 5–149 (ಡುಪ್ಲೆಸಿ; 19.1), 6–149 (ದೋನಿ; 19.2), 7–152 (ಇರ್ಫಾನ್; 19.6).
ಬೌಲಿಂಗ್: ಸಂದೀಪ್ ಶರ್ಮಾ 4–0–23–2 (ವೈಡ್ 1), ಕೈಲ್ ಅಬಾಟ್ 4–0–38–1 (ವೈಡ್ 1), ಅಕ್ಷರ್ ಪಟೇಲ್ 3–0–26–0, ಪ್ರದೀಪ್ ಸಾಹು 4–0–31–0 (ವೈಡ್ 1), ಮೋಹಿತ್ ಶರ್ಮಾ 4–0–23–3, ಗ್ಲೆನ್ ಮ್ಯಾಕ್ಸ್‌ವೆಲ್ 1–0–3–0.
ಕಿಂಗ್ಸ್ ಇಲೆವೆನ್ ಪಂಜಾಬ್ 4 ಕ್ಕೆ 153 (18.4 ಓವರ್‌ಗಳಲ್ಲಿ)
ಮುರಳಿ ವಿಜಯ್ ಸಿ ಮಹೇಂದ್ರಸಿಂಗ್ ದೋನಿ ಬಿ ಮುರುಗನ್ ಅಶ್ವಿನ್ 53
ಮನನ್ ವೊಹ್ರಾ ಎಲ್‌ಬಿಡಬ್ಲ್ಯು ಬಿ ಅಂಕಿತ್ ಶರ್ಮಾ 51
ಶಾನ್ ಮಾರ್ಷ್ ಬಿ ಮುರುಗನ್ ಅಶ್ವಿನ್ 04
ಡೇವಿಡ್ ಮಿಲ್ಲರ್ ಸಿ ಕೆವಿನ್ ಪೀಟರ್ಸನ್ ಬಿ ಮುರುಗನ್ ಅಶ್ವಿನ್ 07
ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 32
ವೃದ್ಧಿಮಾನ್ ಸಹಾ ಔಟಾಗದೆ 04
ಇತರೆ: (ವೈಡ್ 2) 02
ವಿಕೆಟ್ ಪತನ: 1–97 (ವೊಹ್ರಾ; 12.2), 2–103 (ಮಾರ್ಷ್; 14.1), 3–112 (ವಿಜಯ್; 14.6), 4–119 (ಮಿಲ್ಲರ್; 16.2).
ಬೌಲಿಂಗ್: ಇಶಾಂತ್ ಶರ್ಮಾ 3–0–26–0, ಅಂಕಿತ್ ಶರ್ಮಾ 4–0–27–1 (ವೈಡ್ 2), ಆರ್. ಅಶ್ವಿನ್ 4–0–27–0, ಎಂ. ಅಶ್ವಿನ್ 4–0–36–3, ಇರ್ಫಾನ್ ಪಠಾಣ್ 1–0–7–0, ಪೆರೆರಾ 2.4–0–30–0.
ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 6 ವಿಕೆಟ್‌ಗಳ ಜಯ
ಪಂದ್ಯಶ್ರೇಷ್ಠ: ಮನನ್ ವೊಹ್ರಾ.