ನವದೆಹಲಿ: ಕೇಂದ್ರ ಸರ್ಕಾರದ ನೂತನ ಪಿಎಫ್/ ಕಾರ್ಮಿಕ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಕಾರ್ಮಿಕ ಸಚಿವಾಲಯ ಪಿಎಫ್ ಹಿಂತೆಗೆತ ನೀತಿಯನ್ನು ಸಡಿಲಗೊಳಿಸಿದೆ.
ಗೃಹ ನಿರ್ಮಾಣ, ಆರೋಗ್ಯ ಸೇವೆಗಳಿಗೆ, ಮಕ್ಕಳ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ವಿದ್ಯಾಭ್ಯಾಸ, ಮದುವೆ ಕಾರ್ಯಕ್ರಮಗಳಿಗೆ ಮಾತ್ರ ಪಿಎಫ್ ಹಿಂತೆಗೆತಕ್ಕೆ ಅನುಮತಿ ನೀಡಿದೆ. ಪಿಎಫ್ ಹಿಂತೆಗೆತ ನೀತಿಯ ನಿರ್ಬಂಧ ಸಡಿಲಗೊಳಿಸಿರುವುದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟ ಸಂಸ್ಥೆಗಳ ಸದಸ್ಯರಾಗಿ ಸೇರ್ಪಡೆಗೊಂಡವರಿಗೂ ಅನ್ವಯವಾಗಲಿದ್ದು ಆಗಸ್ಟ್ ನಿಂದ ಈ ನಿಯಮ ಜಾರಿಗೆ ಬರಲಿದೆ.
ಕಾರ್ಮಿಕ ಸಂಘಟನೆಗಳು ಕೇಂದ್ರ ಕಾರ್ಮಿಕ ಸಚಿವ ಬಂದಾರು ದತ್ತಾತ್ರೇಯ ಅವರಿಗೆ ಮನವಿ ಸಲ್ಲಿಸಿದ ಬಳಿಕ, ಪಿಎಫ್ ಹಣ ಹಿಂತೆಗೆತಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗಿಳಿಸಲಾಗಿದೆ. ಮೇಲಿನ ಯಾವುದೇ ಕಾರಣಕ್ಕಾಗಿ ಪಿಎಫ್ ಹಣ ಹಿಂಪಡೆಯುವುದಾದರೆ ಬಡ್ಡಿ ಸಮೇತ ಪೂರ್ತಿ ಪಿಎಫ್ ನ್ನು ವಾಪಸ್ ನೀಡಲಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಿಂದಿನ ಉದ್ದೇಶಿತ ಪಿಎಫ್ ನೀತಿ ಪ್ರಕಾರ ಪಿಎಫ್ ಪಾವತಿ ಮಾಡುವವರಿಗೆ 54 ವರ್ಷವಾಗುತ್ತಿದ್ದಂತೆಯೇ ಪಿಎಫ್ ಹಣ ವಾಪಸ್ ವಾಪಸ್ ಪಡೆಯುವಂತಿರಲಿಲ್ಲ. ಪಿಎಫ್ ಹಣ ವಾಪಸ್ ಪಡೆಯಲು ಪಿಎಫ್ ಪಾವತಿ ಮಾಡುವ ವ್ಯಕ್ತಿ ತನಗೆ 58 ವರ್ಷವಾಗುವವರೆಗೆ ಕಾಯಬೇಕಿತ್ತು.