ನವದೆಹಲಿ: ಮಹಾರಾಷ್ಟ್ರದಲ್ಲಿ ಸಂಭವಿಸಿರುವ ಭೀಕರ ಬರಗಾಲ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಸುಪ್ರೀಂ ಆದೇಶಕ್ಕೂ ಮುನ್ನವೇ ಕೇಂದ್ರ ಸರ್ಕಾರ ಬರ ಕುರಿತಂತೆ ವರದಿಯೊಂದನ್ನು ಸಿದ್ಧಪಡಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎ. ನರಸಿಂಹ ಅವರು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎಂ.ಬಿ.ಲೋಕುರ್ ಅವರಿದ್ದ ಪೀಠಕ್ಕೆ ಈ ವರದಿಯನ್ನು ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ ತಯಾರು ಮಾಡಿರುವ ಅಂಕಿ ಅಂಶಗಳ ಪ್ರಕಾರ, ದೇಶದೆಲ್ಲೆಡೆ ಸಂಭವಿಸಿರುವ ಭೀಕರ ಬರಗಾಲದಿಂದಾಗಿ 33 ಕೋಟಿ ಜನರ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಇದರಂತೆ 2,55,923 ಹಳ್ಳಿಗಳು. 254 ಜಿಲ್ಲೆಗಳು ಹಾಗೂ 10 ರಾಜ್ಯಗಳು ಬರಗಾಲಕ್ಕೆ ತುತ್ತಾಗಿವೆ ಎಂದು ಹೇಳಿಕೊಂಡಿದೆ.
ಈ ಹಿಂದಷ್ಟೇ ಬರಗಾಲ ಪೀಡಿತಕ್ಕೊಳಗಾಗಿರುವ 12 ರಾಜ್ಯಗಳಾದ ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಾಂಡ್, ಬಿಹಾರ, ಹರಿಯಾಣ ಹಾಗೂ ಛತ್ತೀಸ್ಗಢ ರಾಜ್ಯಗಳ ಕಡೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ. ಇಂದು ಈ ಎಲ್ಲಾ ರಾಜ್ಯಗಳ ಜನತೆ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂದು ಹೇಳಿ ಸುಪ್ರೀಂನಲ್ಲಿ ಅರ್ಜಿಯೊಂದನ್ನು ಸಲ್ಲಿಕೆಯಾಗಿತ್ತು.
ಅಲ್ಲದೆ, ಅರ್ಜಿಯಲ್ಲಿ ಬರದ ಕುರಿತಂತೆ ಕೆಲವು ಅಂಕಿಅಂಶಗಳನ್ನು ಸಲ್ಲಿಕೆ ಮಾಡಲಾಗಿತ್ತು. ಬೇಸಿಗೆ ಕಾಲ ಆರಂಭಿಕ ತಿಂಗಳಾದ ಏಪ್ರಿಲ್ ತಿಂಗಳಿನಲ್ಲೇ ರಾಜ್ಯಗಳಲ್ಲಿ ಈ ರೀತಿಯ ಬರಗಾಲ ಸಂಭವಿಸಿದಾಗ ಮೇ ತಿಂಗಳಲ್ಲಿ ಪರಿಸ್ಥಿತಿ ಏನಾಗಬೇಕು? 91 ಜಲಾಶಯಗಳು ಇಂದು ಕೇವಲ ಶೇ.23 ರಷ್ಟು ನೀರನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭಿಕ ತಿಂಗಳಲ್ಲೇ ನೀರಿನ ಕೊರತೆಯುಂಟಾಗಿದೆ. 2012 ಇದೇ ತಿಂಗಳಿನಲ್ಲಿ ಭಾರತದ ಜಲಾಶಯಗಳಲ್ಲಿ ಶೇ.28ರಷ್ಟು ನೀರಿತ್ತು. 2009ರಲ್ಲಿ ಶೇ.26 ರಷ್ಟಿತ್ತು.
ಭಾರತ ಕಳೆದ 15 ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಭೀಕರ ಬರಗಾಲವನ್ನು ಅನುಭವಿಸುತ್ತಿದೆ. 2002ರಲ್ಲಿ 17 ರಾಜ್ಯಗಳ 383 ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿದ್ದವು. 2004ರಲ್ಲಿ 9 ರಾಜ್ಯಗಳ 223 ಜಿಲ್ಲೆಗಳು ಹಾಗೂ 2009ರಲ್ಲಿ 12 ರಾಜ್ಯಗಳ 388 ಜಿಲ್ಲೆಗಳ ಮೇಲೆ ಬರಗಾಲದ ಪರಿಣಾಮ ಬೀರಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಈ ಅರ್ಜಿಯನ್ನು ನಿನ್ನೆ ಸುಪ್ರೀಂ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಪೀಠವು ದೇಶದಲ್ಲಿ ಬರಗಾಲ ಸಂಭವಿಸುತ್ತಿದ್ದರೂ, ಈ ಮೊದಲೇ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನೇಕೆ ಕೈಗೊಳ್ಳಲಿಲ್ಲ. ಪರಿಸ್ಥಿತಿ ಬರುವುದಕ್ಕೂ ಮುನ್ನ ಕಣ್ಮುಚ್ಚಿ ಕುಳಿತಿದ್ದೇಕೆ. ಮಳೆ ಕುರಿತಂತೆ ರಾಜ್ಯಗಳ ವರದಿಗಳನ್ನೇ ತಯಾರು ಮಾಡಿಲ್ಲ ಎಂದು ಪ್ರಶ್ನಿಸಿತು.
ಈ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎ. ನರಸಿಂಹ ಅವರು ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ನಲ್ಲಿ ವರದಿಯನ್ನು ಸಲ್ಲಿಕೆ ಮಾಡಿ, ತಮ್ಮ ವಾದವನ್ನು ಮಂಡಿಸಿದರು.
ಅಂಕಿ ಅಂಶಗಳಲ್ಲಿ ಕೆಲವು ಪ್ರದೇಶಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲಾಗಿದೆ. ಆದರೆ, ಅಲ್ಲಿರುವ ಎಲ್ಲಾ ಜನರ ಮೇಲೂ ಬರ ಪರಿಣಾಮ ಬೀರಿದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ರೈತರ ಮೇಲೂ ಪರಿಣಾಮ ಬೀರಿಲ್ಲ.
ಕೇಂದ್ರ ಸರ್ಕಾರ ತಯಾರು ಮಾಡಿರುವ ವರದಿಯ ಪ್ರಕಾರ, 2015-16ರ ಅವಧಿಯಲ್ಲಿ 2011-12ರ ದರದಲ್ಲೇ ಮೌಲ್ಯವರ್ಧಿತ ಸೇವೆಗಳಿಗೆ ಕೃಷಿ, ಜಾನುವಾರು, ಅರಣ್ಯ ಮತ್ತು ಮೀನುಗಾರಿಕೆ ಆದಾಯದ ಶೇ.15.35ರಷ್ಟನ್ನು ಸೇರಿಸಲಾಗಿದೆ. ಗ್ರಾಮೀಣ ಪ್ರದೇಶದ ಶೇ.58 ರಷ್ಚು ಆದಾಯ ಕೃಷಿ ಆಧಾರಿತವಾಗಿದೆ ಎಂದು ಹೇಳಿದರು.
ಈ ವೇಳೆ ಕೇಂದ್ರವನ್ನು ಪ್ರಶ್ನೆ ಮಾಡಿರುವ ಪೀಠವು ಆಧುನಿಕ ತಂತ್ರಜ್ಞಾನವನ್ನೇಕೆ ಅಳವಡಿಕೆ ಮಾಡುತ್ತಿಲ್ಲ? ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.75ಕ್ಕಿಂತಲೂ ಕಡಿಮೆ ಮಳೆಯಾಗಿದ್ದರೆ ರಾಜ್ಯಗಳಿಗೆ ಎಚ್ಚರಿಕೆಯನ್ನು ನೀಡಬೇಕು. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಸ್ಯಾಟಲೈಟ್ ಮೂಲಕ ಮಾಹಿತಿಯನ್ನು ಪಡೆಯಬೇಕು. ಇದರಂತೆ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಅಂತಿಮ ತೀರ್ಮಾನಕ್ಕೆ ಬಂದು ಬೆಳೆ ನಾಶ ಹಾಗೂ ನೀರಿನ ಸಮಸ್ಯೆಯನ್ನು ತಿಳಿದು ಆಯಾ ರಾಜ್ಯಗಳನ್ನು ಬರ ಪೀಡಿತ ರಾಜ್ಯಗಳೆಂದು ಘೋಷಣೆ ಮಾಡಬೇಕು. ನಿಮ್ಮ ಚಟುವಟಿಕೆಗಳು ಆಗಸ್ಟ್ ನಿಂದಲೇ ಆರಂಭವಾಗಬೇಕು ಎಂದು ಹೇಳಿದೆ.
ಮಹಾರಾಷ್ಟ್ರದಲ್ಲಿ ಬೋರ್ ವೆಲ್ ನಿಷೇಧ
ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಸಂಭವಿಸಿದ್ದು, ಅಲ್ಲಿನ ಸರ್ಕಾರ ಇದೀಗಬೋರ್ ವೆಲ್ ಕೊರೆತವನ್ನು ನಿಷೇಧ ಮಾಡಿದೆ. ರಾಜ್ಯದಲ್ಲಿರುವ ಅಣೆಕಟ್ಟುಗಳಲ್ಲಿ ಕೇವಲ ಶೇ.3 ರಷ್ಟು ನೀರಿದ್ದು, ರಾಜ್ಯದಲ್ಲಿ ಬರಗಾಲದಿಂದಾಗಿ ಜನತೆ ಸಂಕಷ್ಟದಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.