ಬೆಂಗಳೂರು: ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ ಉದ್ಯಾನ ನಗರಿಗೆ ಆಗಮಿಸಿದ್ದಾರೆ. ಹಿಂದಿ ನಂತರ ತೆಲುಗು ಸಿನೆಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದ ಪೂನಂ ಈಗ ಸ್ಯಾಂಡಲ್ವುಡ್ ನಲ್ಲೂ ತಮ್ಮ ಝಲಕ್ ತೋರಿಸಲಿದ್ದಾರೆ.
ಈ ಹಿಂದ ‘ಲವ್ ಇಸ್ ಪಾಯಿಸನ್’ ಕನ್ನಡ ಸಿನೆಮಾದಲ್ಲಿ ಐಟಮ್ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಪೂನಂ ನಾಯಕ ನಟಿಯಾಗಿ ನಟಿಸಲು ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ.
ಯುವರಾಜ್ ಈ ಸಿನೆಮಾ ನಿರ್ದೇಶಿಸುತ್ತಿದ್ದು ಅವರಿಗೆ ಇದು ಚೊಚ್ಚಲ ಕನ್ನಡ ಸಿನೆಮಾ. ಅವರು ತೆಲುಗು ತಮಿಳಿ ಸಿನೆಮಾಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದಾರೆ. ಪೂನಂ ನಿರ್ದೇಶಕ ಮತ್ತು ಚಿತ್ರತಂಡದೊಂದಿಗೆ ಇಂದು ನಗರಕ್ಕೆ ಆಗಮಿಸಿದ್ದಾರೆ.
“ನಮಗೆ ತಾಜಾ ನಟಿಯೊಬ್ಬರ ಅವಶ್ಯಕತೆ ಇತ್ತು. ಅವರು ಕನ್ನಡದಲ್ಲಿ ಯಾವುದೇ ಪೂರ್ಣ ಪ್ರಮಾಣದ ಪಾತ್ರದಲ್ಲಿ ಅಭಿನಯಿಸಿಲ್ಲವಾದ್ದರಿಂದ ಇದು ಅವರಿಗೆ ಅತ್ಯುತ್ತಮ ಆಯ್ಕೆ” ಎನ್ನುತ್ತಾರೆ ಯುವರಾಜ್.
“ಇದು ಹಾರರ್ ಸಿನೆಮಾ ಜೊತೆಗೆ ರೋಮ್ಯಾನ್ಸ್ ಕೂಡ ಇರುತ್ತದೆ. ಪೂನಮ್ ಅವರ ನಟನಾ ಕೌಶಲ್ಯವನ್ನು ಹೊರಗೆಳೆಯಲು ಸವಾಲಾಗುವ ಸಿನೆಮಾ ಇದು” ಎನ್ನುತ್ತಾರೆ. ಅಲ್ಲದೆ ಜನ ನಿರೀಕ್ಷಿಸುವಂತೆ ಸಿನೆಮಾದಲ್ಲಿ ಪೂನಂ ಕೆಲವು ಬೋಲ್ಡ್ ದೃಶ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕ.
ಈ ಸಿನೆಮಾಗಾಗಿ ಪೂನಂ ಅವರಿಗೆ ದೊಡ್ಡ ಮೊತ್ತವನ್ನು ನೀಡಲಾಗಿದೆಯಂತೆ. “ಸುಮಾರು ೧ ಕೋಟಿ ನೀಡಲಾಗಿದೆ” ಎನ್ನುತ್ತವೆ ಮೂಲಗಳು. ಇದು ನಾಯಕಿ ಕೇಂದ್ರದ ಸಿನೆಮಾ ಆಗಿದ್ದು, ಮೂವರು ನಟರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. “ಸದ್ಯಕ್ಕೆ ಬೆಂಗಳೂರಿನ ರಾಜೀವ್ ರಾಥೋಡ್ ಆಯ್ಕೆಯಾಗಿದ್ದು, ಇನ್ನುಳಿದ ಪಾತ್ರವರ್ಗಕ್ಕೆ ನಟರ ಶೋಧನೆ ಜಾರಿಯಲ್ಲಿದೆಯಂತೆ. ನೈನ್ ಸ್ಟಾರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಸಿನೆಮಾ ನಿರ್ಮಾಣವಾಗುತ್ತಿದೆ.