ಹಾಸನ: ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಜೋರಾಗಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ದಲಿತ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
ದಲಿತ ಸಿಎಂ ಕೂಗಿನ ಬಗ್ಗೆ ಇಂದು ಸಕಲೇಶಪುರದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, ದಲಿತ ಸಿಎಂ ಎಂದರೆ ನಾನೇ ಆಗಬೇಕು ಎಂದೇನು ಇಲ್ಲ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅಥವಾ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಯಾರದ್ರೂ ಸರಿ. ಒಟ್ಟಿನಲ್ಲಿ ದಲಿತರೊಬ್ಬರು ರಾಜ್ಯದ ಸಿಎಂ ಆಗಬೇಕು ಎಂದಿದ್ದಾರೆ.
ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾದರೆ ಭಾರಿ ಪರಿವರ್ತನೆಯಾಗುತ್ತದೆ ಎಂಬ ನಿರೀಕ್ಷೆಯೇನು ಇಲ್ಲ. ಆದರೆ ನಮಗೂ ಆಡಳಿತ ನಡೆಸುವ ಅರ್ಹತೆ ಇದೆ. ಸರ್ಕಾರ ನಡೆಸುವ ಶಕ್ತಿ ಇದೆ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
ಹಿಂದುಳಿದೊರ ಪಟ್ಟಿಯಿಂದ ನಾವು ಹೊರಬರೋದು ಯಾವಾಗ, ನಾವೂ ಮುಂದುವರೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳೋದು ಯಾವಾಗ ಎಂದು ಪರಮೇಶ್ವರ ಪ್ರಶ್ನಿಸಿದ್ದಾರೆ.