https://youtu.be/R3BDiY6WU_g
ಪುಣೆ: ಕ್ರಿಕೆಟ್ ನಲ್ಲಿ ಎದುರಾಳಿ ತಂಡ ಆಟಗಾರರ ವಿರುದ್ಧ ಕ್ರಿಕೆಟಿಗರ ಕಚ್ಚಾಟ ಸಾಮಾನ್ಯ. ಆದರೆ ತಮ್ಮದೇ ತಂಡ ಆಟಗಾರನ ವಿರುದ್ಧ ಕ್ರಿಕೆಟಿಗನೋರ್ವ ಜಗಳಕ್ಕೆ ನಿಂತ ಘಟನೆ ಐಪಿಎಲ್ ನಲ್ಲಿ ನಡೆದಿದೆ.
ಇಷ್ಟಕ್ಕೂ ಆ ಆಟಗಾರ ಬೇರಾರೂ ಅಲ್ಲ. ಮುಂಬೈ ಇಂಡಿಯನ್ಸ್ ತಂಡದ ಹರ್ಭಜನ್ ಸಿಂಗ್. ಈ ಹಿಂದೆ ಪಂದ್ಯ ಸೋತ ಕೋಪದಲ್ಲಿ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್ ಈ ಭಾರಿ ತಮ್ಮದೇ ತಂಡದ ಆಟಗಾರನ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಇಷ್ಟಕ್ಕೂ ಹರ್ಭಜನ್ ಸಿಂಗ್ ಕೋಪಕ್ಕೆ ಕಾರಣವಾಗಿದ್ದು ಒಂದು ಬೌಂಡರಿ. ಪುಣೆ ವಿರುದ್ಧದ ಪಂದ್ಯದಲ್ಲಿ ಸೌರಭ್ ತಿವಾರಿ ಭಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿ ಇದ್ದ ಅಂಬಾಟಿ ರಾಯುಡು ಪ್ರಯಾಸ ಪಟ್ಟು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.
ಇದು ಭಜ್ಜಿ ಕೋಪ ನೆತ್ತಿಗೇರುವಂತೆ ಮಾಡಿತ್ತು. ಕೂಡಲೇ ರಾಯುಡು ಉದ್ದೇಶಿಸಿ ಭಜ್ಜಿ ನಿಂದಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಅಂಬಾಟಿ ರಾಯುಡು ಮೈದಾನಗಲ್ಲೇ ಭಜ್ಜಿ ವಿರುದ್ಧ ಅಸಮಾಧಾನಗೊಂಡು ಪರಸ್ಪರ ಮಾತಿನ ಚಕಮಕಿಗೆ ಮುಂದಾದರು. ಈ ವೇಳೆ ದಿಢೀರ್ ಸಮಾಧಾನಗೊಂಡ ಭಜ್ಜಿ, ರಾಯುಡು ಅವರನ್ನು ಸಮಾಧಾನಗೊಳಿಸಲು ಮುಂದಾದರಾದರೂ ಆ ಕ್ಷಣಕ್ಕೆ ರಾಯುಡು ಸಮಾಧಾನಗೊಳ್ಳಲಿಲ್ಲ. ಬಳಿಕ ಭಜ್ಜಿ ತಮ್ಮ ಮುಂದಿನ ಓವರ್ ನಲ್ಲಿ ಪೀಟರ್ ಹ್ಯಾಂಡ್ಸ್ ಕಾಂಬ್ ವಿಕೆಟ್ ಪಡೆದಾಗ ಅಸಮಾಧಾನ ಮರೆತ ಉಭಯ ಆಟಗಾರರೂ ಪರಸ್ಪರ ತಬ್ಬಿ ಸಂಭ್ರಮಿಸಿದರು.
ಶ್ರೀಶಾಂತ್ ವಿಷಯದಲ್ಲಿ ತಾಳ್ಮೆ ಕಳೆದುಕೊಂಡಿದ್ದ ಭಜ್ಜಿ, ರಾಯುಡು ವಿಚಾರದಲ್ಲಿ ಹಿರಿತನ-ಪರಿಪಕ್ವತೆ ಪ್ರದರ್ಶನ ಮಾಡಿದ ಭಜ್ಜಿ ಕೂಡಲೇ ರಾಯುಡು ಅವರನ್ನು ಸಮಾಧಾನಗೊಳಿಸುವ ಮೂಲಕ ಆಗಬಹುದಾಗಿದ್ದ ವಾಕ್ಸಮರಕ್ಕೆ ದಿಢೀರ್ ತೆರೆ ಎಳೆದರು.