ಮಂಗಳೂರು,ಮೇ.02 : ರಾಜ್ಯಾದ್ಯಂತ ಮರ ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ಇಬ್ಬರು ಯುವಕರು ಹಮ್ಮಿಕೊಂಡ ಸೈಕಲ್ ಸಾಹಸಕ್ಕೆ ಬೆಂಬಲ ಸೂಚಿಸಿ ಮಂಗಳೂರಿನಲ್ಲೂ ಮಂಗಳೂರು ಬೈಸಿಕಲ್ ಕ್ಲಬ್ ಸದಸ್ಯರು ಸೈಕಲ್ ಯಾತ್ರೆ ನಡೆಸಿದ್ದಾರೆ. ಬೆಂಗಳೂರಿನ ಯುವಕರಾದ ಸುನಿಲ್ ಕೆ.ಜಿ ಹಾಗೂ ಸಾಯಿಬಣ್ಣ ಪೂಜಾರಿ ಅವರು ರಾಜ್ಯದ ಮೂವತ್ತು ಜಿಲ್ಲೆಗಳಲ್ಲೂ ಸಂಚರಿಸಿ, ಗಿಡ ನೆಡುವ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಮಂಗಳೂರಿನ ರ್ಯಾಲಿಯಲ್ಲೂ ಪಾಲ್ಗೊಂಡರು.
ನಗರದ ಮ.ನ.ಪಾ ಕಚೇರಿಯ ಮುಂಭಾಗದಿಂದ ರವಿವಾರ ಮುಂಜಾನೆ ರ್ಯಾಲಿ ಆರಂಭಗೊಂಡಿದ್ದು, ಲೇಡಿಹಿಲ್, ಉರ್ವಾಸ್ಟೋರ್, ಲಾಲ್ಬಾಗ್, ಪಿವಿಎಸ್, ಹಂಪನಕಟ್ಟೆ, ಎ.ಬಿ.ಶೆಟ್ಟಿ ವೃತ್ತ, ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ಪಿವಿಎಸ್ ಮೂಲಕ ಸಂಚರಿಸಿ ಉರ್ವಾ ಕೆನರಾ ಶಾಲೆಗೆ ಬಂದು ಸೇರಿತು.
ಮಂಗಳೂರಿನಲ್ಲಿ ಅರಣ್ಯ ಇಲಾಖೆ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಹನುಮಂತಪ್ಪ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ಗಿಡಗಳು ಸಮೃದ್ಧವಾಗಿ ಬೆಳೆಯುವುದಕ್ಕೆ ಯಾವ ರೀತಿ ನಾಟಿ ವಿಧಾನ ಅನುಸರಿಸಬಹುದು ಎನ್ನುವುದನ್ನು ಸೇರಿದ್ದ ಸೈಕ್ಲಿಸ್ಟ್ಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್, ಏಪ್ರಿಲ್ 22 ವಿಶ್ವ ಪರಿಸರ ದಿನದಿಂದ ತಾವು ಈ ಅಭಿಯಾನ ಆರಂಭಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಂದರ್ಶಿಸಲಿದ್ದೇವೆ ಜೂನ್ 5ರಂದು ಬೆಂಗಳೂರಿನಲ್ಲಿ ರ್ಯಾಲಿ ಕೊನೆಗೊಳ್ಳುತ್ತಿದ್ದು, ಅಲ್ಲಿ ಸೈಕ್ಲಿಸ್ಟ್ಗಳ ಸಮಾವೇಶ ನಡೆಯಲಿದೆ ಎಂದರು. ಕಾರಿನಲ್ಲಿ ಓಡಾಡುವ ಅನೇಕರಿಗೆ ಹೊರಗಿನ ವಾತಾವರಣ ಬಿಸಿಯಾಗುತ್ತಿರುವುದರ ಅರಿವಿಲ್ಲ, ಇದ್ದರೂ ಹವಾನಿಯಂತ್ರಣದಲ್ಲಿರುತ್ತಾರೆ, ಆದರೆ ಜನಸಾಮಾನ್ಯರಿಗೆ ವಾತಾವರಣ ತಣ್ಣಗಿರಬೇಕಾದರೆ ಪ್ರತಿ ಜಿಲ್ಲೆಯಲ್ಲೂ ಮರಗಳ ಸಂಖ್ಯೆ ವೃದ್ಧಿಸಬೇಕು, ಅದಕ್ಕಾಗಿ ಸಾಂಕೇತಿಕವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ ಪುರಾಣಿಕ್, ಹಿರಿಯ ಸೈಕ್ಲಿಸ್ಟ್ಗಳಾದ ಗೋಪಾಲಕೃಷ್ಣ ಬಾಳಿಗ, ಪಣಂಬೂರು ಮಹಮ್ಮದ್, ಡಾ.ಪ್ರೀತಮ್ ಶರ್ಮ, ರೆನ್ನಿ ಡಿ’ಸಿಲ್ವ, ಮಂಗಳೂರು ಬೈಸಿಕಲ್ ಕ್ಲಬ್ ಸಂಚಾಲಕ ಗಣೇಶ್ ನಾಯಕ್ ಮತ್ತಿತರರು ಗಿಡ ನೆಟ್ಟರು. ಪರಿಸರವಾದಿ ಅಶೋಕವರ್ಧನ್ ರ್ಯಾಲಿಗೆ ಚಾಲನೆ ಕೊಟ್ಟರು. ವಲಯ ಅರಣ್ಯಾಧಿಕಾರಿಗಳಾದ ಶ್ರೀಧರ್, ವೆಂಕಟೇಶ್ವರ್, ಕೆನರಾ ಶಾಲೆಯ ಗೋಪಾಲಕೃಷ್ಣ ಶೆಣೈ ಹಾಜರಿದ್ದರು.