ಕನ್ನಡ ವಾರ್ತೆಗಳು

ಭೋಜ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಶಂಕಿತ ನಕ್ಸಲ್ ಸಂಜೀವ ಅಲಿಯಾಸ್ ಸಲೀಂ ಬಂಧನ

Pinterest LinkedIn Tumblr

naxal_sanjieeva_arest

ಕಾರ್ಕಳ, ಮೇ 3: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾನದಿ ಎಂಬಲ್ಲಿ ಎಂಟು ವರ್ಷದ ಹಿಂದೆ ಭೋಜ ಶೆಟ್ಟಿ ಎಂಬವರನ್ನು ಹತ್ಯೆಗೈದ ಪ್ರಕರಣದ ಆರೋಪಿ ಶಂಕಿತ ನಕ್ಸಲ್ ಸಂಜೀವ ಕುಮಾರ್ ಅಲಿಯಾಸ್ ಸಲೀಂ (27) ಎಂಬಾತನನ್ನು ಕಾರ್ಕಳ ಎಎಸ್ಪಿ ಸುಮನಾ ನೇತೃತ್ವದ ಪೊಲೀಸರ ತಂಡ ತುಮಕೂರು ಜಿಲ್ಲೆಯ ಪಾವಗಡದಲ್ಲಿ ರವಿವಾರ ಬಂಧಿಸಿದೆ.

2008ರ ವಿಧಾನಸಭಾ ಚುನಾವಣೆ ಹಿಂದಿನ ದಿನ ಹೆಬ್ರಿ ನಾಡ್ಪಾಲು ಸಮೀಪ ಭೋಜ ಶೆಟ್ಟಿ ಹತ್ಯೆ ನಡೆದಿತ್ತು. ಸಂಜೀವ ಕುಮಾರ್ ಪ್ರಕರಣದ ಆರೋಪಿಯಾಗಿದ್ದು, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ. ತುಮಕೂರಿನಲ್ಲಿ ಈತನಿರುವ ಬಗ್ಗೆ ಮಾಹಿತಿ ಪಡೆದ ಅಲ್ಲಿಗೆ ತೆರಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೋಜ ಶೆಟ್ಟಿ ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕೆ ನಕ್ಸಲರು ಅವರ ಮನೆಗೆ ಹೋಗಿ ಗುಂಡು ಹಾರಿಸಿ ಬೆದರಿಕೆಯೊಡ್ಡಿದ್ದರು. ಆದರೆ ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು 10 ಮಂದಿ ನಕ್ಸಲರು ಭೋಜ ಶೆಟ್ಟಿ ಮನೆಯ ಮುಂಭಾಗ ಬೈಕ್‌ನಲ್ಲಿ ಬರುತ್ತಿದ್ದ ಅವರನ್ನು ತಡೆದುನಿಲ್ಲಿಸಿ ಗುಂಡು ಹಾರಿಸಿ ಹತ್ಯೆಗೈದಿದ್ದರು.

ಪ್ರಕರಣದ ಮೊದಲ ಆರೋಪಿ ಮನೋಹರ್ ಹಾಗೂ ಮೂರನೇ ಆರೋಪಿ ವತ್ಸಲ ಈಗಾಗಲೇ ಪೊಲೀಸ್ ಗುಂಡೇಟಿಗೆ ಬಲಿಯಾಗಿದ್ದಾರೆ, ಹತ್ತನೇ ಆರೋಪಿ ಶಂಕರಪ್ಪ ಅಲಿಯಾಸ್ ವೀರಮಣಿ ತಮಿಳ್ನಾಡು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ.

ಈತನ ವಿರುದ್ಧ ಆಂಧ್ರಪ್ರದೇಶದಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಈತ ಅಲ್ಲಿನ ಪೊಲೀಸರಿಗೆ ಶರಣಾಗಿದ್ದ. ಬಳಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಈತ ದೋಷಮುಕ್ತನಾಗಿದ್ದ. ಸಂಜೀವನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ಮೇ .11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Write A Comment