ಕನ್ನಡ ವಾರ್ತೆಗಳು

ಕಾರ್ಮಿಕನ ಮೇಲೆ ಚಾಮುಂಡಿ ದೈವ ಅವಾಹನೆ : ಗುಡಿ ಬಳಿಯ ಮರ ಕಡಿದವರನ್ನು ಆಟ್ಟಾಡಿಸಿದ ದೈವ.

Pinterest LinkedIn Tumblr

bntwl_tress_bhutha

ಬಂಟ್ವಾಳ, ಮೇ .04: ಕಾರಣಿಕ ಶಕ್ತಿಯನ್ನು ಹೊಂದಿರುವ ದೈವದ ಬನಕ್ಕೆ ಸಂಬಂಧಪಟ್ಟ ಮರ ಕಡಿದ ವ್ಯಕ್ತಿಯ ಮೇಲೆ ‘ದೈವ’ ಆವಾಹನೆಯಾಗಿ ಮರ ಕಡಿಯಲು ಬಂದ ಕಾರ್ಮಿಕರನ್ನು ಅರ್ಧ ಕಿ.ಮೀ. ದೂರ ಅಟ್ಟಾಡಿಸಿದ ಘಟನೆ ತಾಲೂಕಿನ ನರಿಕೊಂಬು ಗ್ರಾಮದ ಪೊಯಿತ್ತಾಜೆ ಎಂಬಲ್ಲಿ ನಿನ್ನೆ ನಡೆದಿದೆ. ಘಟನೆಯಲ್ಲಿ ನಿತ್ರಾಣನಾಗಿದ್ದ ಯುವಕ ತಲೆತಿರುಗಿ ಬಿದ್ದು ಕೆಲ ಸಮಯದ ಬಳಿಕ ಮತ್ತೆ ವಾಸ್ತವ ಸ್ಥಿತಿಗೆ ಮರಳಿದ್ದು ಸ್ಥಳೀಯರಲ್ಲಿ ಭಯ-ಭಕ್ತಿಯನ್ನು ಹೆಚ್ಚಿಸಿದೆ.

ಪೊಯಿತ್ತಾಜೆ ಶಾಂತದುರ್ಗಾ ದೇವಿಗೆ ಸಂಬಂಧಿಸಿದ ಕಾಡಿನ ಕೆಲವು ಮರಗಳನ್ನು ಕಡಿಯಲು ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಅದರಂತೆ ನಿನ್ನೆ ಮುಂಜಾನೆಯೇ ಮರ ಕಡಿಯಲು ಕೆಲಸಗಾರರು ಆಗಮಿಸಿದ್ದರು. ಮಧ್ಯಾಹ್ನದ ಸಮಯ ಚಾಮುಂಡಿ ದೈವದ ಬನಕ್ಕೆ ಹತ್ತಿರದ ಮರವೊಂದರ ಗೆಲ್ಲನ್ನು ಕಡಿಯುತ್ತಿದ್ದ ಓರ್ವನ ಮೇಲೆ ದೈವದ ಆವಾಹನೆ ಯಾಗಿದೆ. ಆತ ಮರ ಕಡಿಯುವ ಕತ್ತಿಯನ್ನು ಎತ್ತಿ ತೋರಿಸುತ್ತಾ ‘ನನ್ನ ಬನದ ಮರ ಕಡಿಯಲು ಹೇಳಿದವರು ಯಾರು? ನಿಮಗೆ ಆ ಹಕ್ಕು ನೀಡಿದವರಾರು.’ ಎಂದು ಪ್ರಶ್ನಿಸುತ್ತಾ ಇತರರನ್ನು ಬೆನ್ನಟ್ಟಲು ಆರಂಭಿಸಿದ ಎನ್ನಲಾಗಿದೆ. ಆತನ ರೌದ್ರಾವತಾರ ಯಾವ ಮಟ್ಟಕ್ಕಿತ್ತು ಎಂದರೆ ಮರ ಕಡಿಯಲು ಬಂದವರು ದಿಕ್ಕಾಪಾಲಾಗಿ ಓಡಿ ತಲೆಮರೆಸಿಕೊಳ್ಳುವವರೆಗೂ ಅಟ್ಟಾಡಿಸಿದ್ದಾನೆ. ಈ ವೇಳೆ ಕತ್ತಿ ಹಿಡಿದು ಯುವಕ ಬೆನ್ನಟ್ಟುವುದನ್ನು ಕಂಡ ದಾರಿಯಲ್ಲಿ ಸಾಗುತ್ತಿದ್ದ ಇತರರೂ ಎದ್ದುಬಿದ್ದು ಓಡಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ದೈವ ಆವಾಹನೆಗೊಂಡಿದ್ದ ಯುವಕ ಸುಮಾರು 200ಮೀಟರ್ ದೂರದಲ್ಲಿದ್ದ ಜಮೀನಿನ ಉಸ್ತುವಾರಿ ನೋಡಿಕೊಳ್ಳುವ ಶ್ರೀಧರ ನಾಯಕ್ ಅವರ ಮನೆ ಬಾಗಿಲಿಗೂ ಬಂದಿದ್ದಾನೆ. ಬಾಗಿಲನ್ನು ಬಡಿದು ನಾಯಕ್ ಅವರನ್ನು ಹೊರಕ್ಕೆ ಕರೆದು ‘ನನ್ನ ಬನದ ಮರವನ್ನು ಕಡಿಯಲು ನಿನಗೆ ಅಧಿಕಾರ ಕೊಟ್ಟವರು ಯಾರು?’ ಎಂದು ಜೋರು ಮಾಡಿದ್ದಾನೆ. ದೈವದ ಕಾರಣಿಕವನ್ನು ಅರಿತ ಶ್ರೀಧರ ನಾಯಕರು, ‘ಹೊಟ್ಟೆಪಾಡಿಗಾಗಿ ಕಾರ್ಮಿಕರು ಈ ಕೆಲಸ ಮಾಡಿದ್ದಾರೆ. ಅವರಿಗೆ ನೂ ತೊಂದರೆ ಆಗದಂತೆ ಕಾಪಾಡು, ಮುಂದೆ ಇಂಥ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಬೇಡಿಕೊಂಡಿದ್ದಾರೆ. ಇದರಿಂದ ಶಾಂತವಾದ ‘ದೈವ’ ಆವಾಹಿತ ವ್ಯಕ್ತಿಯು ನೀರು ಕೊಡುವಂತೆ ಕೇಳಿದ್ದಾನೆ. ಶ್ರೀಧರ ನಾಯಕ್ ಅವರು ತಂಬಿಗೆಯಲ್ಲಿ ನೀರು ತಂದುಕೊಟ್ಟರೂ ಅದು ಸಾಲದು ಕೊಡಪಾನದಲ್ಲಿ ತಲೆಗೆ ಸುರಿಯುವಂತೆ ಅಬ್ಬರಿಸಿದ್ದು, ಬಾವಿಯಿಂದ ನೀರು ಸುರಿದ ಬಳಿಕವಷ್ಟೇ ಯುವಕ ನಿತ್ರಾಣಗೊಂಡು ನೆಲಕ್ಕೆ ಬಿದ್ದಿದ್ದಾನೆ.

ಆವೇಶ್ ಇಳಿದ ಬಳಿಕ ಯುವಕ ‘ನಾನು ಹೇಗೆ ಇಷ್ಟು ಒದ್ದೆ ಆಗಿದ್ದೇನೆ? ನನ್ನ ಚಪ್ಪಲಿ ಎಲ್ಲಿ? ನನ್ನ ವಸ್ತುಗಳು ಎಲ್ಲಿವೆ? ನನ್ನ ಜೊತೆಗಿದ್ದವರು ಎಲ್ಲಿದ್ದಾರೆ’ ಎಂದೆಲ್ಲ ಪ್ರಶ್ನಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಷ್ಟೆಲ್ಲ ಆದ ಬಳಿಕ ಆತನ ಜತೆಗಾರರು ಅವನನ್ನು ಕಾರಿನಲ್ಲಿ ಊರಿಗೆ ಸಾಗಿಸಿದರು.

ಕುತೂಹಲಿಗರ ದಂಡು

ಘಟನೆ ನಡೆದಿರುವ ಪ್ರದೇಶಕ್ಕೆ ಇದೀಗ ಕುತೂಹಲಿಗರು ತಂಡ ತಂಡವಾಗಿ ಆಗಮಿಸುತ್ತಿದ್ದಾರೆ. ಎಲ್ಲರೂ ಚಾಮುಂಡಿ ದೈವದ ಕಾರಣಿಕವನ್ನು ನೆನೆದು ಭಯ-ಭಕ್ತಿಯಿಂದ ಕೈಮುಗಿಯುತ್ತಿದ್ದಾರೆ. ಘಟನೆ ನಡೆದಿರುವ ಬಗ್ಗೆ ಬಾಯಿಂದ ಬಾಯಿಗೆ ಎಲ್ಲೆಡೆ ಹರಡಿದ್ದು ಊರಿನ ಜನರಲ್ಲಿ ಭಕ್ತಿಯನ್ನು ಹೆಚ್ಚಿಸಿದೆ. ಇಲ್ಲಿ ಮರ ಕಡಿಯುವಾಗ ಮೈಲಿಗೆ ಮಾಡದಂತೆ ಜಮೀನಿನ ಉಸ್ತುವಾರಿ ನೋಡಿಕೊಳ್ಳುವವರು ಸೂಚಿಸಿದ್ದರು. ಆದರೆ ಮರ ಕಡಿಯುವವರು ಅದನ್ನು ಸರಿಯಾಗಿ ಪಾಲಿಸದೇ ಇರುವುದೇ ಘಟನೆಗೆ ಕಾರಣ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಆದರೆ ಹಿಂದೂ ದೈವ-ದೇವರುಗಳ ಬಗ್ಗೆ ನಂಬಿಕೆಯೇ ಇರದ ಅನ್ಯಮತೀಯ ಯುವಕನ ಮೈಮೇಲೆ ಆವಾಹನೆಗೊಂಡು ಕಾರಣಿಕರ ಶಕ್ತಿಯನ್ನು ಸಾರಿದ ದೈವದ ಬಗ್ಗೆ ಸಹಜವಾಗಿಯೇ ಹಿಂದೂ ಬಾಂಧವರಲ್ಲಿ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

Write A Comment