ಮಂಗಳೂರು, ಮೇ 4: ದ.ಕ. ಜಿಲ್ಲಾದ್ಯಂತ ಇಂದಿನಿಂದ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆ ಆರಂಭಗೊಂಡಿದೆ.ದ.ಕ. ಜಿಲ್ಲೆಯ 22 ಕೇಂದ್ರಗಳಲ್ಲಿ ಒಟ್ಟು 12,352 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಮಂಗಳೂರಿನ ಕಾಲೇಜು, ಪುತೂರಿನ ಫಿಲೋಮಿನಾ ಕಾಲೇಜು ಕೇಂದ್ರದಲ್ಲಿ 608, ವಿವೇಕಾನಂದ ಕಾಲೇಜು ಕೇಂದ್ರದಲ್ಲಿ 800 ಮತ್ತು ಕೊಂಬೆಟ್ಟು ಪ.ಪೂ. ಕಾಲೇಜು ಕೇಂದ್ರದಲ್ಲಿ 512 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವೃತ್ತಿಪರ ಶಿಕ್ಷಣದ ಸಿ.ಇ.ಟಿ. ಪರೀಕ್ಷೆ ಬುಧವಾರ ಮತ್ತು ಗುರುವಾರ ನಡೆಯಲಿದೆ. ಮೇ 4 ರಂದು ಬೆಳಗ್ಗೆ ಬಯೋಲಾಜಿ, ಅಪರಾಹ್ನ ಗಣಿತ ಶಾಸ್ತ್ರ, ಮೇ 5 ರಂದು ರಾಸಾಯನ ಶಾಸ್ತ್ರ, ಅಪರಾಹ್ನ ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೈ ಗಡಿಯಾರು ಕಟ್ಟಲು ಅವಕಾಶವಿಲ್ಲದ ಕಾರಣ ಪರೀಕ್ಷಾ ಕೊಠಡಿಯೊಳಗೆ ಗೋಡೆ ಗಡಿಯಾರಗಳನ್ನು ಅಳವಡಿಸಲಾಗಿದೆ. ಪುತ್ತೂರಿನಲ್ಲಿ ಪುತ್ತೂರು ಸಹಾಯಕ ಕಮಿಷನರ್ ಡಾ ಕೆ.ವಿ. ರಾಜೇಂದ್ರ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿದ್ದಾರೆ.
ಆಯಾ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಸಹಾಯಕ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯಾ ಕೇಂದ್ರಗಳಲ್ಲಿ ಒಬ್ಬರು ವೀಕ್ಷಕ, ಒಬ್ಬರು ಉತ್ತರ ಪತ್ರಿಕೆ ಭದ್ರತಾಧಿಕಾರಿ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ದ.ಕ. ಜಿಲ್ಲಾದ್ಯಂತ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆ ಇಂದು ಮತ್ತು (ಮೇ 4 ಮತ್ತು 5ರಂದು) ನಾಳೆ ಎರಡು ದಿನಗಳ ಕಾಲ ನಡೆಯಲ್ಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ 200 ಮೀ. ಸುತ್ತಳತೆಯ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶ ಹೊರಡಿಸಿದ್ದಾರೆ.