ಕನ್ನಡ ವಾರ್ತೆಗಳು

ಕೈಕೊಟ್ಟ ವರುಣ : ಬತ್ತಿದ್ದ ನೇತ್ರಾವತಿ-ಕುಮಾರಧಾರ – ತೀರ್ಥಕ್ಷೇತ್ರ ಸಂಗಮ ಕ್ಷೇತ್ರಕ್ಕೂ ತಟ್ಟಿದ ಬರದ ಬಿಸಿ

Pinterest LinkedIn Tumblr

Uppinagadi_no-water

ಪುತ್ತೂರು, ಮೇ.4 : ದಕ್ಷಿಣ ಕಾಶಿಯೆಂದು ಕರೆಯಲ್ಪಡುತ್ತಿರುವ ಇಲ್ಲಿನ ಸಹಸ್ರಲಿಂಗೇಶ್ವರ-ಮಹಾಕಾಳಿ ಕ್ಷೇತ್ರವು ಸದ್ಗತಿದಾಯಕ ಕ್ರಿಯೆಗಳ ಮೂಲಕ ಮೋಕ್ಷಧಾಮ ಎನಿಸಿಕೊಂಡಿದೆ. ಇದೀಗ ದೇವಸ್ಥಾನದ ಬಳಿಯಿಂದ ನೇತ್ರಾವತಿ-ಕುಮಾರಧಾರ ನದಿಗಳ ಹರಿವು ನಿಂತಿದ್ದರಿಂದ ಶ್ರೀ ಕ್ಷೇತ್ರದ ಬಳಿ ಉಭಯ ನದಿಗಳ ಸಂಗಮಕ್ಕೂ ತಡೆಯುಂಟಾಗಿದೆ.

ಉತ್ತರದಲ್ಲಿ ಕಾಶಿ ವಿಶ್ವನಾಥ, ಮಹಾಕಾಳಿ ವೀರಭದ್ರ ಸನ್ನಿಧಿಯಿದೆ. ಅದು ಉತ್ತರ ಕಾಶಿಯೆಂದು ಪ್ರಸಿದ್ಧಿ ಪಡೆದಿದ್ದರೆ, ದಕ್ಷಿಣದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ಕಾಲಭೈರವನ ಕ್ಷೇತ್ರ ದಕ್ಷಿಣದ ಕಾಶಿಯೆಂದು ಪ್ರಖ್ಯಾತವಾಗಿದೆ. ಇಲ್ಲಿ ಪಿಂಡ ಪ್ರಧಾನ, ಅಪರ ಕ್ರಿಯೆ, ಉತ್ತರಾಧಿ ಕ್ರಿಯೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ. ಸಂಗಮ ಕ್ಷೇತ್ರದಲ್ಲಿ ಪಿಂಡ ಪ್ರದಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ರಾಜ್ಯ, ಹೊರ ರಾಜ್ಯದ ಜನರು ಇಲ್ಲಿಗೆ ಬಂದು ತಮ್ಮ ಹಿರಿಯರಿಗೆ ಸದ್ಗತಿ ಕ್ರಿಯೆಗಳನ್ನು ಮಾಡಿ ತೆರಳುವುದನ್ನು ಇಲ್ಲಿ ಕಾಣಬಹುದು. ಹಾಗೆ ಬಂದವರು ಮರಣ ಹೊಂದಿದವರಿಗೆ ಸಂಗಮ ಕ್ಷೇತ್ರದಲ್ಲಿ ಪಿಂಡ ಪ್ರಧಾನ ಮಾಡಿ, ಸಂಗಮದಲ್ಲಿ ಮಿಂದು ತೆರಳುತ್ತಾರೆ. ಆದರೆ ಇದೀಗ ದೇವಸ್ಥಾನದ ಬಳಿಯಿಂದ ಹರಿದು ನೇತ್ರಾವತಿ ನದಿಯಲ್ಲಿ ವಿಲೀನವಾಗುತ್ತಿದ್ದ ಕುಮಾರಧಾರ ನದಿಯೀಗ ಮೇಲ್ನೋಟಕ್ಕೆ ತನ್ನ ಹರಿವಿನ ಪಥ ಬದಲಾಯಿಸಿದ್ದು, ಉಪ್ಪಿನಂಗಡಿಯಲ್ಲಿರುವ ಸಹಸ್ರಲಿಂಗೇಶ್ವರ-ಮಹಾಕಾಳಿ ಕ್ಷೇತ್ರದ ಬಳಿ ನೇತ್ರಾವತಿ ನದಿಯನ್ನು ಸಂಧಿಸುವ ಬದಲು ೩೪ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣದಾಗಿ ಹರಿಯುತ್ತದೆ.

ಸಂಗಮ ಸ್ಥಳದಲ್ಲಿ ಮರಳಿನ ಕಟ್ಟ ಕಟ್ಟಿ ನೇತ್ರಾವತಿ ನದಿಯ ನೀರನ್ನು ನಿಲ್ಲಿಸಲಾಗಿದ್ದು, ಇಲ್ಲಿ ಪಾದ ಮುಳುಗುವಷ್ಟು ಮಾತ್ರ ನಿಂತ ನೀರಿದೆ. ನೇತ್ರಾವತಿ ನದಿ ನೀರಿನ ಹರಿವು ಕೂಡಾ ಉಪ್ಪಿನಂಗಡಿ ಮುಟ್ಟುವಾಗ ನಿಂತು ಹೋಗಿದೆ. ದೇವಸ್ಥಾನದ ಬಳಿ ನೇತ್ರಾವತಿಯ ನಿಂತ ನೀರನ್ನು ಮಾತ್ರ ಕಾಣಬಹುದಾಗಿದೆ. ಒಟ್ಟಿನಲ್ಲಿ ಈ ಬಾರಿಯ ಬಿಸಿಲ ತಾಪ ಐತಿಹಾಸಿಕ ಪ್ರಾಚೀನ ತೀರ್ಥಕ್ಷೇತ್ರವಾದ ಸಂಗಮ ಕ್ಷೇತ್ರಕ್ಕೂ ತಟ್ಟಿದಂತಾಗಿದೆ.

Write A Comment