ನವದೆಹಲಿ, ಮೇ 4: ಇಡೀ ದೇಶದ ಕುತೂಹಲ ಕೆರಳಿಸಿ ಸುಮಾರು 50ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ವ್ಯಾಪಮ್ (ವ್ಯಾವಸಾಯಿಕ್ ಪರೀಕ್ಷಾ ಮಂಡಲ್)ನ ಪ್ರಮುಖ ಆರೋಪಿಯಾಗಿದ್ದು, ಇದುವರೆಗೆ ತಲೆಮರೆಸಿಕೊಂಡಿದ್ದ ರಮೇಶ್ ಶಿವಹರೆ ಎಂಬುವನನ್ನು ಇಂದು ಕಾನ್ಪುರದಲ್ಲಿ ಬಂಧಿಸಲಾಗಿದೆ.
ಪೊಲೀಸರು ಹಾಗೂ ಸಿಬಿಐ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇಂದು ಬೆಳಗ್ಗೆ ವ್ಯಾಪಮ್ ಕಿಂಗ್ಪಿನ್ ಶಿವಹರೆಯನ್ನು ಬಂಧಿಸಲಾಗಿದೆ. ವ್ಯಾಪಮ್ ಹಗರಣದ ಹಲವು ಪ್ರಕರಣಗಳಲ್ಲಿ ಈ ಆರೋಪಿ ಪೊಲೀಸರಿಗೆ ಬೇಕಾಗಿದ್ದ ಎಂದು ಉತ್ತರ ಪ್ರದೇಶ ಡಿಜಿಪಿ ಜಾವೇದ್ ಅಹ್ಮದ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ವ್ಯಾಪಮ್ (ವ್ಯಾವಸಾಯಿಕ್ ಪರೀಕ್ಷಾ ಮಂಡಲ್-ಮಧ್ಯಪ್ರದೇಶ್) ಎಂದೆ ಜನಜನಿತವಾಗಿರುವ ಮಧ್ಯ ಪ್ರದೇಶ ವೃತ್ತಿಪರ ಪರೀಕ್ಷೆ ಮಂಡಳಿ (ಎಂಪಿಪಿಇಬಿ)ಯ ದಲ್ಲಾಳಿಯಾಗಿ ಶಿವಹರೆ, ವಿದ್ಯಾರ್ಥಿಗಳು, ಪೋಷಕರ ಜತೆ ಶಾಮೀಲಾಗಿ ನಕಲಿ ವಿದ್ಯಾರ್ಥಿಗಳಿಂದ ಉತ್ತರ ಬರೆಸಲು ನೆರವಾಗುತ್ತಿದ್ದ. ಅದಕ್ಕೆ ಪ್ರತಿಯಾಗಿ ಅವರಿಂದ ಭಾರೀ ಮೊತ್ತದ ಹಣ ಪಡೆಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2014ರಲ್ಲಿ ಶಿವಹರೆ ಸಲ್ಲಿಸಿದ್ದ ನಿರೀಕ್ಷನಾ ಜಾಮೀನು ಅರ್ಜಿಯನ್ನು ಮಧ್ಯ ಪ್ರದೇಶ ಹೈಕೋರ್ಟ್ ತಳ್ಳಿಹಾಕಿತ್ತು. ಉತ್ತರ ಪ್ರದೇಶದ ನಿವಾಸಿ ಶಿವಹರೆ, ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡದೆ ನನಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದ. ಆದರೆ, ಹಗರಣದಲ್ಲಿ ಇವನೇ ಪ್ರಧಾನ ವ್ಯಕ್ತಿ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.