ಮಂಗಳೂರು, ಮೇ.4: ಜಿಲ್ಲೆಯಲ್ಲಿ ಬಹಳ ಕುತೂಹಲ ಕೆರಳಿಸಿರುವ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಬೆಳಿಗ್ಗೆ ಮಣ್ಣಗುಡ್ಡಯಲ್ಲಿರುವ ಬಿಜೆಪಿ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ವೇದವ್ಯಾಸ್ ಕಾಮತ್ ಅವರ ನಿವಾಸಕ್ಕೆ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಹತ್ಯಾ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಎನ್ನಲಾದ ‘ನಮೋ ಬ್ರಿಗೇಡ್’ ಮುಖಂಡ ನರೇಶ್ ಶೆಣೈಯ ನಿಕಟವರ್ತಿಯಾಗಿರುವ ವೇದವ್ಯಾಸ ಕಾಮತ್ ಮನೆಗೆ ಪೊಲೀಸರು ದಾಳಿ ನಡೆಸುವ ಮೂಲಕ ವಿನಾಯಕ್ ಬಾಳಿಗಾ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ನರೇಶ್ ಶೆಣೈ ತಲೆಮರೆಸಿಕೊಂಡಾಗಿನಿಂದ ವೇದವ್ಯಾಸ ಕಾಮತ್‌ರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನರೇಶ್ ಶೆಣೈಯ ಇರುವಿಕೆಯನ್ನು ಪತ್ತೆ ಹಚ್ಚಲು ಪೊಲೀಸರು ಇಂದು ಪೂರ್ವಾಹ್ನ ಸುಮಾರು 11 ಗಂಟೆ ಹೊತ್ತಿಗೆ ಮಣ್ಣಗುಡ್ಡೆಯಲ್ಲಿರುವ ವೇದವ್ಯಾಸ್ ಕಾಮತ್‌ರ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ದಾಳಿ ವೇಳೆ ವೇದವ್ಯಾಸ್ ಕಾಮತ್ ಅವರ ಮೊಬೈಲ್ ಫೋನ್ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಮಾ.21ರಂದು ಮುಂಜಾನೆ 5.30ರ ಸುಮಾರಿಗೆ ಪಿವಿಎಸ್ ಕಲಾಕುಂಜಾದ ಬಳಿಯ ತಮ್ಮ ನಿವಾಸದಿಂದ ದೇವಸ್ಥಾನಕ್ಕೆ ಹೊರಡುತ್ತಿದ್ದ ವೇಳೆ ಮನೆಯ ಸಮೀಪದಲ್ಲೇ ಬಾಳಿಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಕೊಲೆಯ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿದ್ದರು. ಬಾಳಿಗ ಹತ್ಯೆ ಪ್ರಕರಣದಲ್ಲಿ ನರೇಶ್ ಶೆಣೈ ಅವರನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಹತ್ಯೆ ನಡೆದ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿರುವುದರಿಂದ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಈ ಮಧ್ಯೆ ಹೈಕೋರ್ಟ್ ವಕೀಲರ ಸೂಚನೆಯ ಮೇರೆಗೆ ನರೇಶ್ ಶೆಣೈ ಪರ ವಕೀಲರು ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾಯಲಯದಲ್ಲಿ ತಿರಸ್ಕಾರಗೊಂಡಿತ್ತು.
ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿ ನರೇಶ್ ಶೆಣೈ ಜೊತೆ ಇವರ ಸ್ನೇಹಿತರಾದ ಶ್ರೀಕಾಂತ್ ಹಾಗೂ ವಿಘ್ನೇಶ್ ಕೂಡಾ ತಲೆ ಮರೆಸಿಕೊಂಡಿದ್ದಾರೆ. ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನರೇಶ್ ಶೆಣೈ ಹಾಗೂ ಶ್ರೀಕಾಂತ್ ವಿರುದ್ಧ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಈ ನಡುವೆ ಆರ್‌ಟಿಐ ಕಾರ್ಯಕರ್ತ ವಿನಾಯಕ.ಪಿ. ಬಾಳಿಗಾ ಕೊಲೆ ನಡೆದು ನಲವತ್ತು ದಿನಗಳು ಕಳೆದರೂ ತನಿಖೆ ಕುಂಠಿತಗೊಂಡಿರುವುದನ್ನು ಖಂಡಿಸಿ, ಕೊಲೆಯ ರೂವಾರಿ ಎನ್ನಲಾದ, ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ, ಮಂಗಳೂರಿನ ವಿದ್ಯಾರ್ಥಿ, ಯುವಜನ, ದಲಿತ, ಮಹಿಳಾ, ನಾಗರಿಕ ಸಂಘಟನೆಗಳ ಜಂಟಿ ವೇದಿಕೆಯಾದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಬಾಳಿಗಾ ಕೊಲೆ ನಡೆದ ಪಿ.ವಿ.ಎಸ್ ಕಲಾಕುಂಜ ಬಳಿಯ ಅವರ ನಿವಾಸದಿಂದ ಪೊಲೀಸ್ ಕಮೀಷನರ್ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆದಿದೆ.
ಇನ್ನೊಂದೆಡೆ ಬಾಳಿಗ ಹತ್ಯೆ ತನಿಖೆ ಸಮರ್ಪಕವಾಗಿ ನಡೆಯಬೇಕು. ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಬಾರದು ಎಂದು ಆಗ್ರಹಿಸಿ ಪ್ರೊ. ನರೇಂದ್ರ ನಾಯಕ್ ನೇತೃತ್ವದಲ್ಲಿ ಸಮಾನ ಮನಸ್ಕ ವಿಚಾರವಾದಿಗಳ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದವು.