ಮಂಗಳೂರು: ಕಳೆದ ಮಾ 21ರಂದು ಕೊಲೆಯಾದ ಮಾಹಿತಿ ಹಕ್ಕು ಕಾರ್ಯಕರ್ತ ಮಂಗಳೂರಿನ ವಿನಾಯಕ ಬಾಳಿಗಾ ಪ್ರಕರಣದಲ್ಲಿ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅನಾವಶ್ಯಕವಾಗಿ ಜಿ.ಎಸ್.ಬಿ. ಸಮಾಜದ ಶ್ರೀದೇವಳದ ಹೆಸರು ಹಾಳುಮಾಡುವ ಉದ್ದೇಶದಿಂದ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಉದ್ದೇಶ ಪೂರ್ವಕ ಪತ್ರಿಕೆಗಳು ಹಾಗೂ ದೃಶ್ಯಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರ ನಡೆಸುತ್ತಿವೆ.
ಶ್ರೀ ಕಾಶೀ ಮಠ ಸಂಸ್ಥಾನ ಹಾಗೂ ಮಠಾಧಿಪತಿಗಳ ಕುರಿತಾಗಿಯೂ ಅನಗತ್ಯ ವದಂತಿ, ತಪ್ಪು ಮಾಹಿತಿ ನೀಡಿ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟುಮಾಡುತ್ತಿವೆ. ಇದು ಜಿ.ಎಸ್.ಬಿ. ಸಮಾಜದ , ಶ್ರೀ ದೇವಳದ ಹೆಸರು ಕೆಡಿಸುವ ಷಡ್ಯಂತ್ರವಾಗಿದೆ ಎಂದು ಜಿ.ಎಸ್.ಬಿ. ರಕ್ಷಣಾ ವೇದಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜಿ.ಎಸ್.ಬಿ.ದೇವಾಲಯಗಳ ಒಕ್ಕೂಟದ ಅಂಗ ಸಂಸ್ಥೆಯಾಗಿ ಜಿ.ಎಸ್.ಬಿ. ರಕ್ಷಣಾ ವೇದಿಕೆಯು ಬಾಳಿಗಾ ಕೊಲೆ ಪ್ರಕರಣದಲ್ಲಿ ಜಿ.ಎಸ್.ಬಿ. ಸಮಾಜ ಮತ್ತು ದೇವಳದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಸಮಾಜದಲ್ಲಿ ಅನಗತ್ಯ ಗೊಂದಲವನ್ನುಂಟು ಮಾಡುತ್ತಿರುವ ಬೆಳವಣಿಗೆಗಳ ಕುರಿತು ಸಮಾಲೋಚಿಸುವ ಹಿನ್ನೆಲೆಯಲ್ಲಿ ಮೇ 9ರ ಸಂಜೆ 5:00ಕ್ಕೆ
ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೇವಳಗಳ ಪ್ರತಿನಿಧಿಗಳು ಹಾಗೂ ಪ್ರಮುಖರ ಸಮಾಲೋಚನಾ ಸಭೆ ನಡೆಯಲಿದೆ. ಬೆಳವಣಿಗೆಗೆ ಸಂಬಂಧಿಸಿ ದೊಡ್ಡ ಪ್ರಮಾಣದ ಪ್ರತಿಭಟನಾ ಸಭೆಯನ್ನೂ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಗೌಡಸಾರಸ್ವತ ಸಮಾಜವು ಕಠಿಣ ಪರಿಶ್ರಮ, ದೇವರ ಮೇಲೆ ಅತೀವ ಶೃದ್ಧಾಭಕ್ತಿಯನ್ನು ಇಟ್ಟುಕೊಂಡಿದ್ದು, ತಪ್ಪು ಮಾಡಿದವರಿಗೆ ದೇವರೇ ಶಿಕ್ಷಿಸುವರು ಎಂಬ ಅಪಾರ ನಂಬಿಕೆ ಇಟ್ಟಿರುವ ಸಮಾಜವಾಗಿರುತ್ತದೆ. ಶ್ರೀದೇವಳದ ಆಡಳಿತ ಮಂಡಳಿ ಹಾಗೂ ಭಜಕರಿಗೆ ನಮ್ಮದೇಶದ ಕಾನೂನಿನ ಮೇಲೆ ನಂಬಿಕೆಯಿದ್ದು ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ. ಹಾಗಾಗಿ ಯಾವುದೇ ಅನ್ಯಮಾರ್ಗವನ್ನು ಅವಲಂಬಿಸುವ ಅನಿವಾರ್ಯತೆ ಯಾ ಅವಶ್ಯಕತೆ ಸಮಾಜಕ್ಕಿರುವುದಿಲ್ಲ.
ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅನಾವಶ್ಯಕವಾಗಿ ಶ್ರೀದೇವಳದ ಹೆಸರು ಹಾಳುಮಾಡುವ ಉದ್ದೇಶದಿಂದ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ. ಬಾಳಿಗಾ ಕೊಲೆ ತನಿಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುತ್ತಿದ್ದು ಮುಂದೆಯೂ ಅಗತ್ಯವಿರುವ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ ಎಂದು ಈ ಮೂಲಕ ಹೇಳಬಯಸುತ್ತೇವೆ.
ಗೌಡಸಾರಸ್ವತ ಸಮಾಜದ ಪ್ರತಿಷ್ಠಿತ ದೇವಳಗಳಲ್ಲಿ ರಥಬೀದಿಯಲ್ಲಿರುವ ಶ್ರೀವೆಂಕಟರಮಣ ದೇವಸ್ಥಾನವೂ ಒಂದಾಗಿರುತ್ತದೆ. ಎರಡು ವರ್ಷಗಳ ಹಿಂದೆ ನಡೆದ ಶ್ರೀದೇವಳದ ಜೀರ್ಣೋದ್ಧಾರ ಹಾಗೂ ಪುನಃಪ್ರತಿಷ್ಠಾ ಮಹೋತ್ಸವದ ಕಾಲದಲ್ಲಿ ಯಾವುದೇ ಅವ್ಯವಹಾರ ನಡೆದಿರುವುದಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಬೇಕಾಗಿದ್ದ ಎಲ್ಲಾ ಮಾಹಿತಿಗಳನ್ನೂ ದೇವಳದ ವತಿಯಿಂದ ನೀಡಲಾಗಿದೆ. ಶ್ರೀದೇವಳದಲ್ಲಿನ ಯಾವತ್ತೂ ಕಾರ್ಯಕ್ರಮಗಳು, ವ್ಯವಹಾರಗಳು ಶಿಸ್ತುಬದ್ದ ಹಾಗೂ ಪಾರದರ್ಶಕ ಆಡಳಿತದ ಹಿನ್ನೆಲೆ ಹೊಂದಿದ್ದು ಈ ಕೊಲೆ ಪ್ರಕರಣದಲ್ಲಿ ಶ್ರೀದೇವಳವು ಭಾಗಿಯಾಗಿಲ್ಲ. ಅಲ್ಲದೇ ಅನಗತ್ಯವಾಗಿ ಶ್ರೀ ಕಾಶೀ ಮಠ ಸಂಸ್ಥಾನ ಮತ್ತು ಮಠಾಧಿಪತಿಗಳ ಬಗ್ಗೆಯೂ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ವೇದಿಕೆ ತಿಳಿಸಿದೆ.
ಮೃತ ವಿನಾಯಕ ಬಾಳಿಗಾರವರು ಶ್ರೀದೇವಳದ ಜೀರ್ಣೊದ್ಧಾರ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಈಗಾಗಲೇ ನ್ಯಾಯಾಲಯದಲ್ಲಿ ಹೂಡಿದ್ದ ವ್ಯಾಜ್ಯ ವಿಚಾರಣೆ ಹಂತದಲ್ಲಿದೆ. ಈ ಹಂತದಲ್ಲಿ ಯಾವುದೇ ರೀತಿಯ ಅಪಪ್ರಚಾರ ನ್ಯಾಯಾಂಗ ನಿಂದನೆಯೆನಿಸುತ್ತದೆ.
ಬಾಳಿಗಾ ಕೊಲೆ ನಡೆದ ಬಳಿಕ ನಗರದ ಬಂದರು ಠಾಣಾ ಪೋಲೀಸ್ ವೃತ್ತನಿರೀಕ್ಷಕ ಶಾಂತಾರಾಂರವರು ಶ್ರೀದೇವಳಕ್ಕೆ ಬಂದಿದ್ದು ವಿಚಾರಣೆಯಲ್ಲಿ ಪೂರ್ಣ ಸಹಕಾರ ನೀಡಲಾಗಿದೆ. ಮುಂದೆಯೂ ತನಿಖೆಗೆ ಪೂರ್ಣಪ್ರಮಾಣದಲ್ಲಿ ಸಹಕರಿಸಿದೆ.
ಆದರೆ ಪೋಲಿಸು ಇಲಾಖೆಯ ಮೇಲೆ ಅನಗತ್ಯ ಒತ್ತಡದ ಹೇರಲಾಗುತ್ತಿದೆ. . ಮಾಧ್ಯಮಗಳು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹಬ್ಬಿಸಿ ಸಮಾಜದಲ್ಲಿ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ. ಸಮಾಜ ಬಾಂಧವರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡದೇ ಎಂದಿನಂತೆ ದೇವರು, ದೇವಳ ಹಾಗೂ ಗುರುಪೀಠದ ಮೇಲಿನ ವಿಶ್ವಾಸವನ್ನು ಬೆಳೆಸಿಕೊಂಡು ಸಮಾಜದ ಘನತೆ ಕಾಯುವಂತೆ ವೇದಿಕೆ ಕೋರಿದೆ.