ಬಂಟ್ವಾಳ, ಮೇ.09 : ಜಗತ್ತಿನ ಅತೀ ದೊಡ್ಡ ಕ್ರೋಶೆ ಹೊದಿಕೆಯನ್ನು ನಿರ್ಮಿಸುವುದರ ಮೂಲಕ ‘ಮದರ್ ಇಂಡಿಯಾ ಕ್ರೋಶೆ ಕ್ವೀನ್ಸ್’ (ಎಂಐಸಿಕ್ಯು) ಗ್ರೂಪ್ ಗಿನ್ನೀಸ್ ದಾಖಲೆ ಬರೆದಿದ್ದು ಇದರಲ್ಲಿ ಬಂಟ್ವಾಳದ ತಾಯಿ-ಮಗಳು ಸೇರಿದ್ದು ಚಿನ್ನದ ಪೇಟೆ ಎಂದೇ ಪ್ರಖ್ಯಾತಿಹೊಂದಿರುವ ಬಂಟ್ವಾಳಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಬಂಟ್ವಾಳ ತ್ಯಾಗರಾಜ ರಸ್ತೆಯ ನಿವಾಸಿ ರಾಮಪ್ರಸಾದ್ ಪ್ರಭು ಅವರ ಪತ್ನಿ ಅನುರಾಧ ಆರ್. ಪ್ರಭು ಮತ್ತು ಇವರ ಪುತ್ರಿ ಅನುಷ ಆರ್. ಪ್ರಭು ಅವರು ಗಿನ್ನೀಸ್ ದಾಖಲೆ ನಿರ್ಮಿಸಿದ ಹೊದಿಕೆ ತಯಾರಿಯ ಗ್ರೂಪ್‌ನಲ್ಲಿ ಇರುವ ಬಂಟ್ವಾಳದ ತಾಯಿ ಮಗಳು.
ಗಿನ್ನೀಸ್ ದಾಖಲೆಗಾಗಿ ಜಗತ್ತಿನ 14 ದೇಶಗಳ 2.500ಕ್ಕೂ ಹೆಚ್ಚು ಮಂದಿ ಭಾರತೀಯ ಸ್ತ್ರೀಯರು ಭಾಗವಹಿಸಿದ್ದ ಕ್ರೋಶೆ ಹೊದಿಕೆ ತಯಾರಿಕೆಯಲ್ಲಿ ಕರ್ನಾಟಕ ಮೂಲದ ಮದರ್ ಇಂಡಿಯಾ ಕ್ರೋಶೆ ಕ್ವೀನ್ಸ್ ಫೇಸ್‌ಬುಕ್ ಮೂಲಕ ಗ್ರೂಪ್ ಮಾಡಿಕೊಂಡಿದ್ದರು. ಇದರಲ್ಲಿ ಬಂಟ್ವಾಳದ ಅನುರಾಧ ಆರ್. ಪ್ರಭು, ಇವರ ಪುತ್ರಿ ಅನುಷ ಆರ್. ಪ್ರಭು ಹಾಗೆಯೇ ಮಂಗಳೂರಿನ ಅಶ್ವಿನಿ, ಪುತ್ತೂರಿನ ದುರ್ಗಾದೇವಿ ಎಂಬವರು ಕೂಡಾ ಈ ಗ್ರೂಪಿನಲ್ಲಿ ಹೆಸರು ನೋಂದಾಯಿಸಿದ್ದರು. ಈ ಗ್ರೂಪ್ 11,148 ಚದರ ಮೀಟರ್‌ನಷ್ಟು ವಿಸ್ತೀರ್ಣದ ಬೃಹತ್ ಕ್ರೋಶೆ ಹೊದಿಕೆಯನ್ನು ನಿರ್ಮಿಸಿ ಗಿನ್ನೀಸ್ ದಾಖಲೆ ಬರೆದಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಗ್ರೂಪ್ 3,348 ಚದರ ಮೀಟರ್ ವಿಸ್ತೀರ್ಣದ ಕ್ರೋಶೆ ಹೊದಿಕೆಯನ್ನು ನಿರ್ಮಿಸಿ ದಾಖಲೆ ಮಾಡಿತ್ತು. ಈ ದಾಖಲೆಯನ್ನು ಮದರ್ ಇಂಡಿಯಾ ಕ್ರೋಶೆ ಕ್ವೀನ್ಸ್ ಗ್ರೂಪ್ ಮುರಿದಿದೆ.
ಈ ಸ್ಪರ್ಧೆಯು ಚೆನ್ನೈನ ತೊರೈಪಕ್ಕಂ ಎಮ್‌ಎನ್‌ಎಮ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜನವರಿ 31ರಂದು ನಡೆದಿತ್ತು.
ಸಂತಸ ತಂದಿದೆ: ಮದರ್ ಇಂಡಿಯಾ ಕ್ರೋಶೆ ಕ್ವೀನ್ಸ್ ಗ್ರೂಪ್‌ನಲ್ಲಿ ಕರ್ನಾಟಕ ರಾಜ್ಯದ ಸುಮಾರು 200ಕ್ಕೂ ಹೆಚ್ಚು ಸ್ತ್ರೀಯರಿದ್ದು ತಮ್ಮ ಗ್ರೂಪ್ ಕ್ರೋಶೆ ಹೊದಿಕೆ ತಯಾರಿಕೆಯಲ್ಲಿ ಇದೀಗ ಗಿನ್ನೀಸ್ ದಾಖಲೆ ಪಡೆದಿರುವುದು ಸಂತಸ ತಂದಿದೆ ಎಂದು ಗ್ರೂಪ್‌ನ ಸದಸ್ಯೆ ಅನುರಾಧ ಆರ್. ಪ್ರಭು ಅವರು ಪ್ರತಿಕ್ರಿಯಿಸಿದ್ದಾರೆ.
ಗಿನ್ನೀಸ್ ದಾಖಲೆ ಬರೆದ ಹೊದಿಕೆಯನ್ನು ನಿರ್ಮಿಸಲು ಆರು ತಿಂಗಳ ಕಾಲ ತಗಲಿದೆ. ಇದಕ್ಕೆ ಹಲವಾರು ಮಂದಿ ಸಹಕಾರವನ್ನು ನೀಡಿದ್ದು ಅವರಿಗೆಲ್ಲರಿಗೂ ನಮ್ಮ ಗ್ರೂಪ್‌ನ ಕೃತಜ್ಞತೆಗಳು ಎಂದು ಅವರು ತಿಳಿಸಿದರು.