ಕರ್ನಾಟಕ

ಆಗುವುದೇ ಸಂಪುಟ ಸರ್ಜರಿ

Pinterest LinkedIn Tumblr

Sidduಬೆಂಗಳೂರು, ಮೇ ೧೧- ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ನಾಯಕತ್ವ ಬದಲಾಗಲಿದೆ ಎಂಬ ಸುದ್ದಿಗಳು ಕಾಂಗ್ರೆಸ್ ಪಕ್ಷದಲ್ಲಿ ಬಲ ಪಡೆದಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನ್ರರಚನೆಯ ರಾಜಕೀಯ ಗಾಳ ಉರುಳಿಸಿದ್ದು, ಸಂಪುಟ ಪುನರಚನೆಯ ಬೇಡಿಕೆಯನ್ನು ಹೈಕಮಾಂಡ್‌ನ ಮುಂದೆ ಇಡಲು ಸಿದ್ಧತೆ ಸಿ.ಎಂ. ಸಿದ್ದರಾಮಯ್ಯ ಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ರಾಜ್ಯ ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ದೆಹಲಿಯಲ್ಲಿ ಉಳಿಯಲಿದ್ದು, ಇಂದು ರಾತ್ರಿ ಪಕ್ಷದ ವರಿಷ್ಠ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನ್ರರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗಿಗೆ ಕೆಲ ಹಿರಿಯ ನಾಯಕರು ಒತ್ತಾಸೆಯಾಗಿ ನಿಂತಿರುವುದನ್ನು ಅರಿತಿರುವ ಸಿ.ಎಂ. ಸಿದ್ದರಾಮಯ್ಯ ಸಂಪುಟ ಪುನ್ರರಚನೆಯ ಮೂಲಕ ಈ ನಾಯಕತ್ವ ಬದಲಾವಣೆ ಕೂಗಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ.
ಪಕ್ಷದ ವರಿಷ್ಠರ ಮನ ಒಲಿಸಿ ಸಂಪುಟ ಪುನರ್ ರಚನೆಯ ಬೇಡಿಕೆಗಳ ಒಪ್ಪಿಗೆ ಪಡೆದರೆ ತಮ್ಮ ಗದ್ದುಗೆಗೆ ಸಂಚಕಾರವಿಲ್ಲ, ತಮ್ಮ ಕುರ್ಚಿ ಭದ್ರವಾಗಲಿದೆ ಎಂಬುದರ ಲೆಕ್ಕಾಚಾರದ ಮೇಲೆ ಸಿ.ಎಂ. ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ದಾಳ ಉರುಳಿಸಿದ್ದಾರೆ.
ರಾಜ್ಯದಲ್ಲಿ ಬರ ಇದೆ. ಮಳೆ ಬೀಳುವವರೆಗೂ ಸಂಪುಟ ಪುನರ್ ರಚನೆ ಇಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ತಮ್ಮ ಹೇಳಿಕೆಗೆ ವಿರುದ್ಧವಾಗಿ ಈ ತಿಂಗಳಾಂತ್ಯಕ್ಕೆ ಸಂಪುಟ ಪುನರ್ ರಚಿಸುವುದಾಗಿ ಹೇಳಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದ್ದು, ನಾಯಕತ್ವ ಬದಲಾವಣೆ ಕೂಗಿನ ಧ್ವನಿ ಅಡಗಿಸಲು ಸಂಪುಟ ಪುನರ್ ರಚನೆಯ ಅಸ್ತ್ರ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿಗಳ ಸಂಪುಟ ಪುನರ್ ರಚನೆಯ ಬೇಡಿಕೆಗೆ ಹೈಕಮಾಂಡ್ ಅಸ್ತು ಎನ್ನಲಿದೆಯೇ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಪುತ್ರನ ಲ್ಯಾಬ್ ಹಗರಣ, ದುಬಾರಿ ವಾಚ್ ಪ್ರಕರಣ, ಎಸಿಬಿ ರಚನೆಗಳಿಂದ ಸಿ.ಎಂ. ಸಿದ್ದರಾಮಯ್ಯ ವಿರುದ್ಧ ಗರಂ ಆಗಿರುವ ಪಕ್ಷದ ಹೈಕಮಾಂಡ್ ಸಿ.ಎಂ. ಸಿದ್ದರಾಮಯ್ಯನವರ ಸಂಪುಟ ಪುನರ್ ರಚನೆಯ ಬೇಡಿಕೆಗೆ ಅಷ್ಟು ಸುಲಭವಾಗಿ ಒಪ್ಪುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

Write A Comment