(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಈ ಊರಲ್ಲಿ ಎಲ್ಲವೂ ಇದೆ. ಆದರೇ ಯಾವುದೊಂದು ಸುವ್ಯವಸ್ಥಿತವಾಗಿಲ್ಲ. ಯಾವುದೋ ವರ್ಷದಲ್ಲಿ ನಡೆದ ಕಾಮಗಾರಿ ಬಳಿಕ ಅದನ್ನು ನಿರ್ವಹಣೆಯನ್ನೂ ಮಾಡದ ಕಾರಣ ಸೇತುವೆ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದೆ. ಇನ್ನು ರಸ್ತೆಗಳು ಹೊಂಡ-ಗುಂಡಿಯಿಂದ ಕೂಡಿ ಧೂಳುಮಯವಾಗಿ ಬಿಟ್ಟಿದೆ. ಇದೇ ಡೇಂಜರಸ್ ಸೇತುವೆಯಲ್ಲಿ ಯಡಮೊಗೆ ಆಸುಪಾಸಿನ ಜನರ ನಿತ್ಯದ ಪಯಣ.
ಕುಂದಾಪುರ ತಾಲೂಕಿನಿಂದ ಮೂವತ್ತೆಂಟು ಕಿಲೋಮೀಟರ್ ಸಾಗಿದರೇ ಪಶ್ಚಿಮ ಘಟ್ಟದ ತಪಲು ಪ್ರದೇಶದಲಿ ಸಿಗುವ ಗ್ರಾಮವೇ ಯಡಮೊಗೆ. ತೀರಾ ಕುಗ್ರಾಮ ಒಂದೆಡೆಯಾದರೇ ಇನ್ನೊಂದೆಡೆ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತ ಯಡಮೊಗೆ ಇನ್ನೂ ಯಾವ ಅಭಿವೃದ್ಧಿಯನ್ನೂ ಕಂಡಿಲ್ಲ. ಹೊಸಂಗಡಿಯಿಂದ ಯಡಮೊಗೆಗೆ ಸಂಪರ್ಕ ಕಲ್ಪಿಸುವ ಇಲ್ಲಿನ ರಸ್ತೆಗಳು ಈವರೆಗೂ ತೇಪೆ ಭಾಗ್ಯವನ್ನೇ ಕಂಡಿಲ್ಲ. ಧೂಳುಮಯವಾದ ಕಚ್ಚಾ ರಸ್ತೆಯಲ್ಲಿಯೇ ಇಲ್ಲಿನ ಜನರ ನಿತ್ಯ ಪಯಣ. ಒಂದೆಡೆಯಲ್ಲಿ ಯಡಮೊಗೆ ಜಂಬೆಹಾಡಿ ನಾಗ-ಬ್ರಹ್ಮ-ಯಕ್ಷಿ ದೈವಸ್ಥಾನದ ಸಮೀಪ ಇರುವ ಸೇತುವೆ ಬೀಳುವ ಸ್ಥಿತಿ ತಲುಪಿದ್ದು ಅದರಲಿಯೇ ನಿತ್ಯ ನೂರಾರು ವಾಹನಗಳು ಸಂಚರಿಸಬೇಕಾದ ಅನಿವಾರ್ಯತೆಯಿದೆ.
ಜಂಬೆಹಾಡಿ ಸಮೀಪ ಕುಬ್ಜಾ ನದಿಗೆ ಸುಮಾರು 50 ಮೀಟರ್ ಉದ್ದದ ಸೇತುವೆಯನ್ನು ಕಳೆದ ೪೮ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣವಾಗಿದ್ದೇನೋ ನಿಜ. ಆದರೇ ಆ ಬಳಿಕದಲ್ಲಿ ಯಾವುದೇ ಸಂಬಂದಪಟ್ಟವರಿಂದ ಇದರ ನಿರ್ವಹಣಾ ಕಾರ್ಯ ನಡೆದಿಲ್ಲ. ಸದ್ಯ ಸೇತುವೆಯ ಪಿಲ್ಲರ್ಗೆ ಅಳವಡಿಸಿದ ಶಿಲೆಗಲ್ಲುಗಳು ಕಿತ್ತು ಹೋಗಿದೆ. ಸ್ಲ್ಯಾಬ್ ಕೂಡ ಶಿಥಿಲಗೊಂಡಿದೆ. ಸೇತುವೆ ಕೆಳಭಾಗವಂತೂ ಯಾವುದೋ ಒಂದು ಬಲದಲ್ಲಿ ನಿಂತಿದ್ದು ಈ ವರ್ಷ ಮಳೆಗಾಲದಲ್ಲಿ ಸೇತುವೆ ನೆಲಕ್ಕಚ್ಚುವ ಭೀತಿಯಲ್ಲಿ ಇಲ್ಲಿನ ಸ್ಥಳೀಯರಿದ್ದಾರೆ.
ಶಿಥಿಲಗೊಂಡ ಈ ಸೇತುವೆ ಮೇಲೆ ನಿತ್ಯ ಹತ್ತಾರು ಬಾರೀ ಪ್ರಯಾಣಿಕರನ್ನು ಕುಳ್ಳೀರಿಸಿಕೊಂಡು ಬಸ್ಸುಗಳು ಹೋಗುತ್ತದೆ. ಅಲ್ಲದೇ ಲಾರಿ ಸಮೇತ ನೂರರು ವಾಹನಗಳು ಈ ರಸ್ತೆ ಹಾಗೂ ಸೇತುವೆಯನ್ನು ಭಯದಿಂದಲೇ ಆಶ್ರಯಿಸಿದೆ. ಇನ್ನು ಅನಿವಾರ್ಯ ಸಮಯದಲ್ಲಿ ಆಟೋ ರಿಕ್ಷಾಗಳನ್ನು ಕರೆದರೇ ಈ ರಸ್ತೆ ಅವ್ಯವಸ್ಥೆಗೆ ಹೆದರಿ ಅವರು ಇಲ್ಲಿಗೆ ಬರಲು ಒಪ್ಪುವುದೇ ಇಲ್ಲವಂತೆ. ಅನಾರೋಗ್ಯ ಪರಿಸ್ಥಿತಿಯ ಸಮಯದಲ್ಲಿ ಈ ಭಾಗದ ಜನರು ಪಡುವ ಪಾಡು ದೇವರಿಗೆ ಪ್ರೀತಿ. ಇನ್ನು ಮಳೆ ಬಂದರೇ ಈ ಭಾಗಕ್ಕೆ ಬಸ್ಸು ಬರುವುದೇ ಇಲ್ಲ. ಆ ಸಮಯದಲ್ಲಿ ನೂರಾರು ವಿದ್ಯಾರ್ಥಿಗಳು ನಡೆದೇ ಸಾಗಬೇಕು.
ಇನ್ನೇನು ಮಳೆಗಾಲ ಬರುತ್ತಿದೆ. ಇಲ್ಲಿನ ಜನರಲ್ಲಿ ನಡುಕ ಜಾಸ್ಥಿಯಾಗಿದೆ. ಈಗಲೋ..ಆಗಲೋ ಅನ್ನುವ ಸ್ಥಿತಿಯಲ್ಲಿ ಸೇತುವೆ ಇದೆ. ರಸ್ತೆಗಳು ಸಂಪೂರ್ಣ ಕೆಟ್ಟಿದೆ. ಬೀದಿದೀಪಗಳ ಭಾಗ್ಯವಂತೂ ಯಡಮೊಗೆ ಪಾಲಿನ ಜನರಿಗೆ ಮರಿಚೀಕೆಯೇ ಸರಿ. ಇಲ್ಲಿನ ಹತ್ತುಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಸ್ಥಳೀಯರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರ ಗಮನಕ್ಕೆ ತರುವ ಕೆಲಸವನ್ನು ಮಾಡಿದ್ದರೆ. ಶಾಸಕರು ಕೂಡ ಸಮಸ್ಯೆಗಳ ನಿವಾರಣೆ ಬಗ್ಗೆ ಆಶ್ವಾಸನೆಯನ್ನು ನೀಡಿದ್ದಾರೆ. ಆದರೇ ಯಾವ ಕೆಲಸಗಳು ಈವರೆಗೂ ನಡೆದಿಲ್ಲ. ಹೀಗೆ ಮುಂದುವರಿದರೇ ಪ್ರತಿಭಟನೆ ಅನಿವಾರ್ಯ ಎನ್ನುತ್ತಾರೆ ಈ ಭಾಗದ ನಾಗರೀಕರು.
ಒಟ್ಟಿನಲ್ಲಿ ಮೂಲಸೌಕರ್ಯಗಳಾದ ರಸ್ತೆ, ಸೇತುವೆ, ದಾರಿದೀಪ ಸಮಸ್ಯೆಗಳಿಂದ ಯಡಮೊಗೆ, ಜಂಬೆಹಾಡಿ ಮೊದಲಾದ ಭಾಗದ ಜನರು ಬಸವಳಿದು ಹೋಗಿದ್ದಾರೆ. ಇನ್ನಾದರೂ ಸಂಬಂದಪಟ್ಟವರು ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವರೇ ಕಾದುನೋಡಬೇಕಿದೆ.